
ಮೈಸೂರು
ಕಲಾಮಂದಿರದ ಆವರಣದಲ್ಲಿ ಕಿರುರಂಗಮಂದಿರ ಉದ್ಘಾಟಿಸಿದ ಸಿಎಂ
ಮೈಸೂರು, ಸೆ.೨೧: ಕಲಾಮಂದಿರದ ಮುಂಭಾಗ ನೂತನವಾಗಿ ನಿರ್ಮಿಸಲಾಗಿರುವ ಕಿರು ರಂಗಮಂದಿರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಉದ್ಘಾಟಿಸಿದರು.
ಮೈಸೂರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ವಿಸ್ತಾರ ಹೆಚ್ಚಾಗುತ್ತಿರುವುದರಿಂದ ಕಾರ್ಯಕ್ರಮಗಳ ಆಯೋಜನೆಗೆ ಸ್ಥಳಾವಕಾಶದ ಅವಶ್ಯಕತೆ ಇತ್ತು. ಈ ಹಿನ್ನೆಲೆಯಲ್ಲಿ ನಗರದ ಮುಖ್ಯ ರಂಗಕಲಾವಿದರು ಕಿರುರಂಗ ಮಂದಿರ ಚಾಲನಾ ಸಮಿತಿಯನ್ನು ರಚಿಸಿಕೊಂಡು ಕಲಾಮಂದಿರದ ಆವರಣದಲ್ಲಿ ಕಿರುರಂಗಮಂದಿರ ನಿರ್ಮಾಣ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ೨.೨೫ ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಿರುರಂಗಮಂದಿರವನ್ನು ಸಿಎಂ ಉದ್ಘಾಟಿಸಿದರು.
ಕಿರುರಂಗಮಂದಿರ ಸುಸಜ್ಜಿತವಾದ ಧ್ವನಿ ಬೆಳಕು ಸಂಯೋಜನೆಯೊಂದಿಗೆ ಇನ್ನೂರು ಆಸನಗಳ ವ್ಯವಸ್ಥೆ ಹೊಂದಿದ್ದು, ಎರಡು ಪ್ರತ್ಯೇಕ ಗ್ರೀನ್ ರೂಮ್ಗಳ ನಿರ್ಮಾಣದೊಂದಿಗೆ ಸಿದ್ಧವಾಗಿದೆ. ಹೊರಾಂಗಣ ಕಲೆಯನ್ನು ಅಭಿವೃದ್ಧಿಪಡಿಸಲು ಹೊಂದಿಕೊಂಡಂತೆ ಒಂದು ವೇದಿಕೆ ನಿರ್ಮಾಣವಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಚಿವೆ ಉಮಾಶ್ರೀ, ಸಂಸದ ಆರ್.ಧ್ರುವನಾರಾಯಣ್, ಶಾಸಕ ಎಂ.ಕೆ.ಸೋಮಶೇಖರ್ ಮೈಲ್ಯಾಕ್ ಅಧ್ಯಕ್ಷ ಎಚ್.ಎ.ವೆಂಕಟೇಶ್, ಜಿಲ್ಲಾಧಿಕಾರಿ ಡಿ.ರಂದೀಪ್ ಉಪಸ್ಥಿತರಿದ್ದರು. (ವರದಿ ಬಿ.ಎಂ)