ಕರ್ನಾಟಕಪ್ರಮುಖ ಸುದ್ದಿ

ಮಹಾರಾಷ್ಟ್ರ ಮಾದರಿ ಮೌಢ್ಯ ನಿಷೇಧ ಕಾಯ್ದೆ ಜಾರಿ ಮಾಡಲು ಸರ್ಕಾರ ತಯಾರಿ

ಬೆಂಗಳೂರು, ಸೆ.21 (ಪ್ರಮುಖ ಸುದ್ದಿ): ರಾಜ್ಯದಲ್ಲಿ ಈ ಮೊದಲು ತರಲು ಉದ್ದೇಶಿಸಲಾಗಿದ್ದ ಮೌಢ್ಯ ನಿಷೇಧ ಕಾಯ್ದೆಗೆ ಪ್ರಬಲ ವಿರೋಧ ವ್ಯಕ್ತವಾದ ಕಾರಣ ಕೆಲವು ಬದಲಾವಣೆಗಳೊಂದಿಗೆ ಮಹಾರಾಷ್ಟ್ರ ಮಾದರಿಯ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ರಾಜ್ಯ ಸರ್ಕಾರ ಮತ್ತೆ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

ಈ ಮೊದಲು ತರಲುದ್ದೇಶಿಸಿದ್ದ ಮೌಢ್ಯ ನಿಷೇಧ (ತಿದ್ದುಪಡಿ) ಕಾಯ್ದೆಯಲ್ಲಿ ಜ್ಯೋತಿಷ್ಯ ಮತ್ತು ವಾಸ್ತುಶಾಸ್ತ್ರವನ್ನೂ ನಿಷೇಧಿತ ಪಟ್ಟಿಗೆ ಸೇರಿಸಿದ್ದರಿಂದ ಕಾಯ್ದೆ ಜಾರಿಯ ಬಗ್ಗೆ ಪ್ರಬಲ ವಿರೋಧ ವ್ಯಕ್ತವಾಗಿತ್ತು. ಈ ಕಾರಣದಿಂದ ಇವೆರಡೂ ವಿಷಯಗಳನ್ನು ಕೈಬಿಟ್ಟು ಮಹಾರಾಷ್ಟ್ರ ಮಾದರಿಯ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಉನ್ನತಮೂಲಗಳು ತಿಳಿಸಿವೆ.

ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ತಿದ್ದುಪಡಿ ವಿಧೇಯಕದ ಕುರಿತು ಮುಂದಿನ ಸಚಿವಸಂಪುಟ ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಿದ ನಂತರವೇ ಕಾಯ್ದೆಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ.

ಜ್ಯೋತಿಷ್ಯ, ವಾಸ್ತು ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಜನಸಾಮಾನ್ಯರನ್ನು ಶೋಷಿಸಲಾಗುತ್ತಿದೆ ಎಂಬ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ಮೌಢ್ಯ ನಿಷೇಧ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿತ್ತು. ದಿನ ಬೆಳಗಾದರೆ ಟಿವಿಗಳಲ್ಲಿ,ಮಾಧ್ಯಮಗಳಲ್ಲಿ ಜ್ಯೋತಿಷ್ಯ, ವಾಸ್ತುವಿನಂತಹ ವಿಷಯಗಳ ವೈಭವೀಕರಣವಾಗುತ್ತಿದ್ದು ಇದರಿಂದ ಇದರ ಹೆಸರಿನಲ್ಲಿ ಜನರನ್ನು ಶೋಷಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂಬ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ ತಿದ್ದುಪಡಿ ವಿಧೇಯಕವನ್ನು ಜಾರಿಗೆ ತರಲು ಮುಂದಾದಾಗ ವ್ಯಾಪಕ ಮತ್ತು ವ್ಯವಸ್ಥಿತ ವಿರೋಧ ವ್ಯಕ್ತವಾಗಿತ್ತು.

ಮೌಢ್ಯ ನಿಷೇಧ(ತಿದ್ದುಪಡಿ)ಕಾಯ್ದೆ ಜಾರಿಗೆ ಬಂದರೆ ದೇವಸ್ಥಾನಗಳಿಗೆ ಹೋಗುವುದೂ ಮೌಢ್ಯವಾಗುತ್ತದೆ ಎಂದು ಸರ್ಕಾರ ತೀರ್ಮಾನಕ್ಕೆ ಬರುತ್ತದೆ ಎಂಬುದರಿಂದ ಹಿಡಿದು ಹಲವು ರೀತಿಗಳಲ್ಲಿ ಕಟು ಟೀಕೆಗಳು ವ್ಯಕ್ತವಾದವು. ಇಷ್ಟೇ ಅಲ್ಲದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಚಿವ ಸಂಪುಟದ ಸಹೋದ್ಯೋಗಿಗಳಲ್ಲೇ ಕಾಯ್ದೆಯ ಕುರಿತು ತೀವ್ರ ಭಿನ್ನಾಭಿಪ್ರಾಯಗಳು ವ್ಯಕ್ತವಾದ ಕಾರಣ ಕಾಯ್ದೆ ಜಾರಿ ಮಾಡದೆ ಪರಿಷ್ಕರಣೆಗೆ ಅವಕಾಶ ಮಾಡಿಕೊಡಲಾಗಿತ್ತು.

ಬಲಿ ನಿಷೇಧಕ್ಕೆ ವಿರೋಧ !

ಉತ್ತರ ಕರ್ನಾಟಕ ಭಾಗದ ಹಲವು ಶಾಸಕರು ಕಾಯ್ದೆಯಲ್ಲಿನ ಕೆಲವು ನಿಯಮಗಳನ್ನು ವಿರೋಧಿಸುತ್ತಾ, ಜಾತ್ರೆಗಳಲ್ಲಿ ಕುರಿಬಲಿಯಂತಹ ಆಚರಣೆಗಳು ಜಾರಿಯಲ್ಲಿವೆ. ಒಂದು ವೇಳೆ ಕುರಿ ಬಲಿಯನ್ನು ನಿಷೇಧಿಸಿದರೆ ನಾವು ಚುನಾವಣೆಗೆ ಹೋಗುವುದೇ ಕಷ್ಟವಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದರು.

ಜ್ಯೋತಿಷ್ಯ, ವಾಸ್ತು, ಕುರಿಬಲಿಯಂತಹ ವಿಷಯಗಳಲ್ಲಿ ಸಂಪ್ರದಾಯ ಬಿಡಲು ಸಾಧ್ಯವಾಗದವರು ಪ್ರಬಲ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ವಿಧೇಯಕದಲ್ಲಿನ ಇಂತಹ ಅಂಶಗಳನ್ನು ಬದಲಾವಣೆ ಮಾಡಿ ವಿಧೇಯಕದ ಕರಡುಪ್ರತಿ ಅಂತಿಮಗೊಳಿಸುವ ಹೊಣೆಯನ್ನು ‘ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ’ದ ತಜ್ಞರಿಗೆ ವಹಿಸಿತ್ತು. ಸಚಿವರು, ಶಾಸಕರು, ರಾಜ್ಯ ಕಾನೂನು ತಜ್ಞರ ಅಭಿಪ್ರಾಯ ಪಡೆದು ಮಹಾರಾಷ್ಟ್ರದ ಮಾದರಿಯಲ್ಲಿ ಮೌಢ್ಯ ನಿಷೇಧ(ತಿದ್ದುಪಡಿ)ಕಾಯ್ದೆಗೆ ಇದೀಗ ಅಂತಿಮ ರೂಪ ನೀಡಲಾಗಿದ್ದು, ಮುಂದಿನ ಸಂಪುಟಸಭೆಯಲ್ಲಿ ಅನುಮೋದನೆ ದೊರಕುವ ಸಾಧ್ಯತೆ ಇದೆ.

(ಎನ್.ಬಿ)

Leave a Reply

comments

Related Articles

error: