ಕರ್ನಾಟಕಪ್ರಮುಖ ಸುದ್ದಿ

ಲಿಂಗಾಯತ ಧರ್ಮಕ್ಕಾಗಿ ಸೆ.24ರಂದು ಪಕ್ಷಾತೀತವಾದ ಬೃಹತ್ ಸಮಾವೇಶ : ಸಚಿವ ಎಂ.ಬಿ.ಪಾಟೀಲ್

ಕಲಬುರಗಿ, ಸೆ.21 : ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಯ ನಿಟ್ಟಿನಲ್ಲಿ ಜನಾಭಿಪ್ರಾಯ ಒಟ್ಟುಗೂಡಿಸುವ ಮುಂದಾಳತ್ವ ವಹಿಸಿರುವವರಲ್ಲಿ ಒಬ್ಬರಾದ ರಾಜ್ಯ ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು, ಇದಕ್ಕಾಗಿ ಮತ್ತೊಂದು ಸಮಾವೇಶವನ್ನು ಸೆ.24ರಂದು ಕಲಬುರಗಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪ್ರತ್ಯೇಕ ಧರ್ಮದ ಮಾನ್ಯತೆ ದೊರಕಿಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಇದೇ ಭಾನುವಾರ ಕಲಬುರಗಿಯಲ್ಲಿ ಲಿಂಗಾಯತರ ಸಮಾವೇಶವನ್ನು ಆಯೋಜಿಸಲಾಗಿದೆ. ಸಮಾವೇಶಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಪಕ್ಷವನ್ನು ಹೊರತುಪಡಿಸಿ ಲಿಂಗಾಯತ ಸಮುದಾಯದ ಯಾರು ಬೇಕಾದರೂ ಈ ಸಮಾವೇಶದಲ್ಲಿ ಭಾಗವಹಿಸಬಹುದು ಎಂದು ತಿಳಿಸಿದ್ದಾರೆ.

ಈ ಬೃಹತ್ ಸಮಾವೇಶಕ್ಕೆ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡಿನಿಂದ ಬರುವ ಸುಮಾರು 5 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಈ ಸಮಾವೇಶದಲ್ಲಿ ಭಾಗವಹಿಸುವಂತೆ ಲಿಂಗಾಯತ ಸಮುದಾಯದ ಮನೆಮನೆಗೆ ತೆರಳಿ ಮುಖಂಡರು ಜನರಿಗೆ ಅರಿವು ಮೂಡಿಸುತ್ತಿದ್ದಾರೆ. ಬೆಳಗಾವಿಯಲ್ಲಿ ನಡೆದ ಸಮಾವೇಶದಂತೆ ಕಲಬುರಗಿ ಸಮಾವೇಶವೂ ಯಶಸ್ವಿಯಾಗುವುದರಲ್ಲಿ ಯಾವುದೆ ಅನುಮಾನವಿಲ್ಲ ಎಂದು ಹೇಳಿದರು.

(ಎನ್.ಬಿ)

Leave a Reply

comments

Related Articles

error: