
ದೇಶಪ್ರಮುಖ ಸುದ್ದಿ
ನವೆಂಬರ್ನಲ್ಲಿ ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಪಟ್ಟಾಭಿಷೇಕ?
ನವದೆಹಲಿ, ಸೆ. 21: ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿರುವ ರಾಹುಲ್ ಗಾಂಧಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಪಟ್ಟಾಭಿಷೇಕ ಮುಂದಿನ ನವೆಂಬರ್ ತಿಂಗಳಲ್ಲಿ ಜರುಗಲಿದೆ ಎಂದು ವರದಿಗಳು ತಿಳಿಸಿವೆ.
ಇದರೊಂದಿಗೆ ತಾವು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ 19 ವರ್ಷಗಳ ಬಳಿಕ ಅಧಿನಾಯಕಿ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದಂತಾಗಿದೆ. ತಮ್ಮ ಪುತ್ರ ರಾಹುಲ್ ಗಾಂಧಿಯವರಿಗೆ ಪಟ್ಟಾಭಿಷೇಕ ಮಾಡುವ ಮೂಲಕ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಲು ಸೋನಿಯಾ ಗಾಂಧಿಯವರು ತೀರ್ಮಾನಿಸಿದ್ದು, ಪಕ್ಷದ ಜವಾಬ್ದಾರಿ ರಾಹುಲ್ ಹೆಗಲೇರಲಿದೆ.
ಕಳೆದ ಕೆಲ ತಿಂಗಳುಗಳಿಂದ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆದಿದ್ದು, ಪಕ್ಷದ ಕಾರ್ಯಕಾರಿ ಸಮಿತಿ ಚುನಾವಣೆ ನಡೆಸಲೂ ಈಗಾಗಲೇ ಅಂತಿ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬ್ರಿಟಿಷರ ವಿರುದ್ಧ ಹೋರಾಟಕ್ಕೆ ವೇದಿಕೆಯಾಗಿದ್ದ ಐತಿಹಾಸಿಕ ಕಾಂಗ್ರೆಸ್ ಪಕ್ಷವನ್ನು, ಮಹಾತ್ಮಾ ಗಾಂಧಿ, ಸುಭಾಶ್ ಚಂದ್ರ ಬೋಸ್, ಜವಾಹರಲಾಲ್ ನೆಹರು, ಆ್ಯನಿಬೆಸೆಂಟ್, ಸರೋಜಿನಿ ನಾಯ್ಡು, ಇಂದಿರಾ ಗಾಂಧಿಯವರಂತ ಘಟನುಘಟಿಗಳು ಮುನ್ನಡೆಸಿದ್ದ ಪಕ್ಷವನ್ನು 19 ವರ್ಷಗಳ ಕಾಲ ನಿಭಾಯಿಸಿದ ಸೋನಿಯಾ ಗಾಂಧಿಯವರು ತಮ್ಮ ಪುತ್ರ ರಾಹುಲ್ ಗಾಂಧಿಯವರಿಗೆ ಪಟ್ಟಾಭಿಷೇಕ ಮಾಡುವ ಮೂಲಕ ಅಧಿಕಾರ ಹಸ್ತಾಂತರ ಮಾಡುತ್ತಿದ್ದಾರೆ.
ಮುಖ್ಯವಾಗಿ ತಮ್ಮ ಅತ್ತೆ ಇಂದಿರಾ ಗಾಂಧಿ ಅವರ ನಂತರ ಮಹಿಳಾ ಅಧ್ಯಕ್ಷೆಯಾಗಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ್ದ ಸೋನಿಯಾ ಗಾಂಧಿಯವರು ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರೂ ಅಧಿಕಾರದ ಚುಕ್ಕಾಣಿ ತಮ್ಮ ಪುತ್ರ ರಾಹುಲ್ ಗಾಂಧಿಯವರ ಕೈಯಲ್ಲೇ ಇರುವುದಿಂದ ಸೋನಿಯಾ ಅವರ ಛಾಯಾ ಆಡಳಿತವೇ ಪಕ್ಷದಲ್ಲಿ ಮುಂದುವರಿಯಲಿದೆ ಎಂದು ಪಕ್ಷದ ನಾಯಕರು ಭಾವಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಪಕ್ಷದ ಸಂಸದೀಯ ಸಮಿತಿಯ ಮುಖ್ಯಸ್ಥೆಯಾಗಿ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ ಸೋನಿಯಾ ಮುಂದುವರೆಯಲಿದ್ದಾರೆ.
(ಎನ್.ಬಿ)