ಕ್ರೀಡೆಪ್ರಮುಖ ಸುದ್ದಿಮೈಸೂರು

ಕ್ರೀಡಾಪಟುಗಳ ಭವಿಷ್ಯ ರೂಪಿಸಲು ಶೀಘ್ರದಲ್ಲಿಯೇ ಕ್ರೀಡಾ ನೀತಿ ರೂಪಿಸಲಾಗುವುದು : ಪ್ರಮೋದ್ ಮಧ್ವರಾಜ್

ಮೈಸೂರು,ಸೆ.21:- ಕ್ರೀಡಾಪಟುಗಳಿಗೆ ಭವಿಷ್ಯ ರೂಪಿಸಿಕೊಡಲು ಶೀಘ್ರದಲ್ಲಿಯೇ ಕ್ರೀಡಾ ನೀತಿಯನ್ನು ರೂಪಿಸಲಾಗುವುದು ಎಂದು ಕ್ರೀಡಾ ಹಾಗೂ ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.

ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ದಸರಾ ಕ್ರೀಡಾಕೂಟಕ್ಕೆ ಕ್ರೀಡಾ ಜ್ಯೋತಿ ಬೆಳಗಿ ಬಲೂನ್ ಹಾರಿ ಬಿಡುವ ಮೂಲಕ ಸಚಿವ ಪ್ರಮೋದ್ ಮಧ್ವರಾಜ್ ಚಾಲನೆ ನೀಡಿದರು.  ಬಳಿಕ ಮಾತನಾಡಿದ ಅವರು ದಸರಾ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಕ್ಯಾಶ್ ಅವಾರ್ಡ್, ಮತ್ತು ಅವರಿಗೆ ನೀಡುವಂತಹ ಪ್ರಮಾಣಪತ್ರಕ್ಕೆ ಮಾನ್ಯತೆ ನೀಡಲಾಗುವುದು ಎಂದು ಘೋಷಿಸಿದರು. ದಸರಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದವರಿಗೆ 25,000ರೂ, ಬೆಳ್ಳಿ ಪದಕ ಪಡೆದವರಿಗೆ 15ಸಾವಿರ ರೂ, ಕಂಚಿನ ಪದಕ ಪಡೆದವರಿಗೆ 10ಸಾವಿರ ರೂ.ನಗದು ನೀಡಲಾಗುವುದು. ಕ್ರೀಡಾಕೂಟದಲ್ಲಿ ಪ್ರಶಸ್ತಿ ಪಡೆದವರನ್ನು ರಾಜ್ಯ ಹಾಗೂ ಕೇಂದ್ರಮಟ್ಟದಲ್ಲಿಯೂ ಗುರುತಿಸುವಂತೆ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಚೆಸ್ ನಲ್ಲಿ ಸಾಧನೆಗೈದ ಮೈಸೂರಿನ  ಚೆಸ್ ಗ್ರ್ಯಾಂಡ್ ಮಾಸ್ಟರ್ ಎಂ.ಎಸ್.ತೇಜ್ ಕುಮಾರ್ ಗೆ 10 ಲಕ್ಷ ರೂ. ಘೋಷಣೆ ಮಾಡಿದರಲ್ಲದೇ, ಅಂತಾರಾಷ್ಟ್ರೀಯ ಮಹಿಳಾ  ಕ್ರಿಕೆಟ್ ಆಟಗಾರ್ತಿಯರಾದ  ವೇದ ಕೃಷ್ಣಮೂರ್ತಿ ಮತ್ತು ರಾಜೇಶ್ವರಿ ಗಾಯಕ್ವಾಡ್ ಅವರಿಗೆ ತಲಾ 25 ಲಕ್ಷ ರೂ. ಸರ್ಕಾರದ ವತಿಯಿಂದ ನೀಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಈ ಮೂವರನ್ನೂ ಸನ್ಮಾನಿಸಲಾಯಿತು. ಚಾಮುಂಡಿ ಬೆಟ್ಟದಿಂದ ಡಾ.ಎಂ.ಪಿ.ವರ್ಷ ಹಾಗೂ ಕುಮಾರಸ್ವಾಮಿ ತಂಡದವರು ತಂದ ಕ್ರೀಡಾ ಜ್ಯೋತಿಯನ್ನು ಬೆಳಗಿಸಲಾಯಿತು. 30 ಜಿಲ್ಲಾಗಳಿಂದ ಬಂದ ಕ್ರೀಡಾಪಟುಗಳ ಆಕರ್ಷಕ ಪಥಸಂಚಲನ ನಡೆಯಿತು. ಸುಮಾರು ಎರಡು ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಂಡಿದ್ದು, ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಈ ಸಂದರ್ಭ ಮೈಸೂರು ದಸರಾ ಕ್ರೀಡಾ ಕೂಟ ಉಪಸಮಿತಿ ಅಧ್ಯಕ್ಷ ಸೋಮಶೇಖರ್, ಕಾರ್ಯದರ್ಶಿ ಸತೀಶ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: