
ಕರ್ನಾಟಕಪ್ರಮುಖ ಸುದ್ದಿ
ವಿದ್ಯಾನಗರ-ಹೈದರಾಬಾದ್ ನಡುವೆ ವಿಮಾನಸೇವೆಗೆ ಚಾಲನೆ; ಮುಂಬೈ, ಬೆಂಗಳೂರಿಗೆ ಸಂಪರ್ಕ : ಜಯಂತ್ ಸಿನ್ಹಾ
ಬಳ್ಳಾರಿ, ಸೆ.21 (ಪ್ರಮುಖ ಸುದ್ದಿ): ಬಳ್ಳಾರಿ ಸಮೀಪದ ವಿದ್ಯಾನಗರ ಮತ್ತು ತೆಲಂಗಾಣ ರಾಜಧಾನಿ ಹೈದರಾಬಾದ್ ನಗರಗಳ ನಡುವೆ ವಿಮಾನಯಾನ ಸಂಪರ್ಕಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ಅವರು ಗುರುವಾರ (ಇಂದು) ಬೆಳಗ್ಗೆ ಚಾಲನೆ ನೀಡಿದರು.
ತೋರಣಗಲ್ನ ವಿಜಯನಗರ ವಿಮಾನನಿಲ್ದಾಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಉಡಾನ್” ಯೋಜನೆಯಡಿಯಲ್ಲಿ ಪ್ರಾದೇಶಿಕ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ವಿದ್ಯಾನಗರ(ಬಳ್ಳಾರಿ)-ಹೈದರಾಬಾದ್ ನಡುವೆ ಮಹತ್ವದ ವಿಮಾನಯಾನ ಸೇವಾ ಸೌಲಭ್ಯಕ್ಕೆ ಚಾಲನೆ ನೀಡಲಾಯಿತು. ಈ ವಿಮಾನಯಾನ ಸೌಲಭ್ಯದಿಂದ ವಾಣಿಜ್ಯೋದ್ಯಮ ಮತ್ತು ಪ್ರವಾಸೋದ್ಯಮ ಬೆಳವಣಿಗೆಗೆ ನೆರವಾಗಲಿದೆ ಎಂದರು.
ವಿದ್ಯಾನಗರ-ಹೈದರಾಬಾದ್ ನಡುವೆ ಇಂದಿನಿಂದ ವಿಮಾನಯಾನ ಸೇವೆ ಆರಂಭವಾಗಿದೆ. ಮೈಸೂರಿನ ನಂತರ ಬಳ್ಳಾರಿಯಲ್ಲಿ ಈ ಸೇವೆ ಉಡಾನ್ ಯೋಜನೆ ಅಡಿ ಆರಂಭವಾಗಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಉಡಾನ್ ಯೋಜನೆ ಅಡಿ ವಿಮಾನಯಾನ ಸೇವೆ ಆರಂಭವಾಗಲಿದೆ. ಆರಂಭಿಕವಾಗಿ ವಿದ್ಯಾನಗರ(ಬಳ್ಳಾರಿ)ದಿಂದ ಹೈದರಾಬಾದ್ ನಡುವೆ ಸೇವೆ ಆರಂಭಿಸಲಾಗಿದ್ದು, ನವೆಂಬರ್ ವೇಳೆಗೆ ವಿದ್ಯಾನಗರದಿಂದ ಬೆಂಗಳೂರು, ಮುಂಬೈ, ಗೋವಾ ಸೇರಿದಂತೆ ಅನೇಕ ಕಡೆ ಇಲ್ಲಿಂದ ವಿಮಾನಯಾನ ಸೇವಾ ಸೌಲಭ್ಯ ಕಲ್ಪಿಸಲಾಗುವುದು ಎಂದು ಅವರು ವಿವರಿಸಿದರು.
ಹವಾಯ್ ಚಪ್ಪಲ್ ಸೆ ಹವಾಯ್ ಜಹಾಜ್ ಎಂದರೆ ಶ್ರೀಸಾಮಾನ್ಯ ಕೂಡ ವಿಮಾನಯಾನ ಮಾಡಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದೆ. ಈ ಕನಸು ಈಗ ನನಸಾಗುತ್ತಿದೆ. ವಿಮಾನ ದರಗಳು ಮತ್ತು ಸೇವೆ ಸುಲಭವಾಗಿ ಎಟಕುವಂತೆ ಕ್ರಮಕೈಗೊಂಡಿದೆ. ರಾಜ್ಯದ ಪ್ರಸ್ತಾಪಿತ ಎಲ್ಲ ಯೋಜನೆಗಳೂ ಶೀಘ್ರ ಪೂರ್ಣಗೊಳ್ಳಲಿವೆ ಎಂದು ಅವರು ಹೇಳಿದರು.
ವಿದ್ಯಾನಗರ(ಬಳ್ಳಾರಿ)-ಹೈದರಾಬಾದ್ ನಡುವೆ ಸಂಚರಿಸುವ ವಿಮಾನದಲ್ಲಿ 70 ಸೀಟುಗಳಿದ್ದು, ಹೈದರಾಬಾದ್ನಿಂದ ಈ ವಿಮಾನವು ಬೆಳಗ್ಗೆ 6:20ಕ್ಕೆ ಹೊರಡಲಿದ್ದು ಬೆಳಗ್ಗೆ 7:25ಕ್ಕೆ ವಿದ್ಯಾನಗರಕ್ಕೆ ಬರಲಿದೆ. ವಿದ್ಯಾನಗರದಿಂದ ಬೆಳಗ್ಗೆ 7;55ಕ್ಕೆ ಹೊರಡುವ ವಿಮಾನ ಹೈದರಾಬಾದ್ಗೆ ಬೆಳಗ್ಗೆ 9ಕ್ಕೆ ತಲುಪಲಿದೆ. ಒಟ್ಟು 65 ನಿಮಿಷಗಳ ಅವಧಿಯಲ್ಲಿ ಈ ವಿಮಾನ ಸಂಚರಿಸಲಿದೆ ಎಂದು ವಿವರಿಸಿದರು.
ಕಾರ್ಮಿಕ, ಕೌಶಲ್ಯ ಅಭಿವೃದ್ಧಿ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿ, “ಉಡಾನ್ ಅಡಿ ಆರಂಭಿಸಲಾಗಿರುವ ಈ ಸೇವೆಯಿಂದ ಸಂಪರ್ಕ ವ್ಯವಸ್ಥೆ ವೇಗ ಪಡೆದುಕೊಳ್ಳಲಿದೆ. ವಿದ್ಯಾನಗರದಿಂದ ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ” ಎಂದರು.
ವಿಮಾನಯಾನ ಸೇವೆ ಆರಂಭಿಸುವಲ್ಲಿ ರಾಜ್ಯ ಸರಕಾರದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ನೂತನವಾಗಿ ಕಲ್ಬುರ್ಗಿ, ವಿಜಯಪುರ, ಹಾಸನ, ಬಳ್ಳಾರಿ, ಶಿವಮೊಗ್ಗ ಈ ಮುಂತಾದ ಕಡೆಗಳಲ್ಲಿ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ನಮ್ಮ ಸರ್ಕಾರವು ಈಗಾಗಲೇ ರೂ.89.29 ಕೋಟಿಗಳನ್ನು 2017-18ರ ಸಾಲಿನ ಆಯವ್ಯಯದಲ್ಲಿ ಮೀಸಲಿಟ್ಟಿದೆ. ಹುಬ್ಬಳ್ಳಿ, ಬೆಳಗಾವಿ, ಮಂಗಳೂರು, ಬೀದರ್ ಮುಂತಾದ ಕಡೆಗಳಲ್ಲಿ ಈಗಿರುವ ವಿಮಾನ ನಿಲ್ದಾಣಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ನಮ್ಮ ಸರ್ಕಾರವು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಸದರಾದ ಬಿ.ಶ್ರೀರಾಮುಲು, ಕರಡಿ ಸಂಗಣ್ಣ, ಶಾಸಕರಾದ ಆನಂದಸಿಂಗ್, ಕೆ.ಸಿ.ಕೊಂಡಯ್ಯ, ಡಿ.ಸಿ ರಾಮ್ ಪ್ರಸಾತ್ ಮನೋಹರ್, ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ, ಉದ್ಯಮಿ ಸಜ್ಜನ್ ಜಿಂದಾಲ್ ಅವರೂ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
(ಎನ್.ಬಿ)