ಪ್ರಮುಖ ಸುದ್ದಿಮೈಸೂರು

ಕುಪ್ಪಣ್ಣ ಪಾರ್ಕ್ ನಲ್ಲಿ ತಲೆ ಎತ್ತಿ ನಿಂತಿದೆ ಐಫೆಲ್ ಟವರ್ : ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ ಪ್ರವಾಸಿಗರು

ಮೈಸೂರು,ಸೆ.21:- ಓ ಈ ಕಡೆ ನಿಂತುಕೊಂಡರೆ ಹೇಗೆ..? ಇಲ್ಲಿಂದ ಚೆನ್ನಾಗಿ ಕಾಣಿಸತ್ತಾ…ಸ್ವಲ್ಪ ಈ ಕಡೆ ಬನ್ನಿ ಹಾಂ ಈಗ ಚೆನ್ನಾಗಿ ಬಂತು ಯಾಕ್ ಹೀಗೆ ಹೇಳ್ತಿದ್ದಾರೆ ಅಂದ್ಕೋತಿದ್ದೀರಾ ಇಂಥಹ ಮಾತುಗಳು ಕೇಳಿ ಬಂದಿದ್ದು ಕುಪ್ಪಣ್ಣ ಪಾರ್ಕ್ ನಲ್ಲಿ.

ವಿಶ್ವವಿಖ್ಯಾತ ದಸರಾ ಪ್ರಯುಕ್ತ ಕುಪ್ಪಣ್ಣಪಾರ್ಕ್ ನಲ್ಲಿ ಫಲಪುಷ್ಪಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಹೂಗಳಿಂದ ಶ್ರೀಚನ್ನಕೇಶವ ದೇವಾಲಯವನ್ನು ನಿರ್ಮಿಸಿರುವುದು ಖುಷಿ ನೀಡಿದೆ ಎಂದರು. ಈ ಸಂದರ್ಭ ಸಚಿವ ತನ್ವೀರ್ ಸೇಠ್, ಮೇಯರ್ ಎಂ.ಜೆ.ರವಿಕುಮಾರ್, ಜಿಲ್ಲಾಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು. ದಸರಾ ಫಲಪುಷ್ಪ ಪ್ರದರ್ಶನ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದು, ಫೋಟೋಗಾಗಿ ಮುಗಿಬೀಳುತ್ತಿದ್ದಾರೆ. ಈ ಬಾರಿ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಕಲರ್ ಫುಲ್ ಪ್ಲವರ್ ಗಳ ಹವಾ ಆರಂಭವಾಗಿದ್ದು, ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆಯಾಗಿ ಸೋಮನಾಥಪುರದ ಶ್ರೀಚನ್ನಕೇಶವ ದೇವಾಲಯವನ್ನು ಮೂವತ್ತೇಳು ಅಡಿ ಅಗಲ, ಹದಿನೆಂಟು ಅಡಿ ಎತ್ತರ ಹಾಗೂ ಹದಿನಾರು ಅಡಿ ಉದ್ದ ವಿಸ್ತೀರ್ಣದಲ್ಲಿ ವಿವಿಧ ಬಣ್ಣದ ಮೂರು ಲಕ್ಷ ಗುಲಾಬಿ ಹೂಗಳಿಂದ ನಿರ್ಮಾಣ ಮಾಡಲಾಗಿದೆ. 17. ಅಡಿಯ  ದೊಡ್ಡ ಹೂ ಗಡಿಯಾರವನ್ನು ಗುಲಾಬಿಯಿಂದ ನಿರ್ಮಿಸಲಾಗಿದೆ. ಆರ್ಕಿಡ್ಸ್ ಹೂಗಳಿಂದ ಬಾರ್ಬಿ ಗರ್ಲ್ಸ್, ದೊಡ್ಡ ಗಡಿಯಾರ, ಹಲವು ಧಾನ್ಯಗಳ ಬಳಕೆ ಮಾಡಿ ಬುದ್ಧ, ಬಸವಣ್ಣ, ಡಾ.ಅಂಬೇಡ್ಕರ್ ಅವರ ಮೂರ್ತಿಯನ್ನು ನಿರ್ಮಿಸಲಾಗಿದೆ.  2,15,000 ವಿವಿಧ ಜಾತಿಯ ಹೂವಿನ ಗಿಡಗಳನ್ನು ಬೆಳೆದು ಪ್ರದರ್ಶಿಸಲಾಗುತ್ತಿದೆ. ಬಿಳಿ ಹಾಗೂ ಹಳದಿ ಬಣ್ಣದ ಹೂಗಳನ್ನು ಬಳಸಿ ಐಫೆಲ್ ಟವರ್ ನ್ನು ನಿರ್ಮಿಸಲಾಗಿದೆ. ಆರ್ಕಿಡ್ಸ್, ಬೀನ್ಸಾಯ್, ಕ್ಯಾಕ್ಟರ್ಸ್, ಅಂಥೋರಿಯಂ, ತರಕಾರಿ ಕೆತ್ತನೆ ವಿವಿಧ ರೀತಿಯ ಹೂವಿನ ಜೋಡಣೆ, ಒಣಗಿದ ಹೂಗಳ ಜೋಡಣೆ, ಔಷಧಿ ಹಾಗೂ ಸುಗಂಧ ಗಿಡಗಳು, ಸಾವಯವ ಮಳಿಗೆ, ಜೇನು ಮಾರಾಟ ಕೇಂದ್ರ, ಟೆರಾಕೋಟ ಹಾಗೂ ಕರಕುಶಲ ವಸ್ತುಗಳ ಮಳಿಗೆಗಳನ್ನು ತೆರೆಯಲಾಗಿದೆ. ತರಕಾರಿ ಹಾಗೂ ಹಣ್ಣಿನ ಕೆತ್ತನೆ ವಿವಿಧ ಬಗೆಯ ಹೂವಿನ ಬಳ್ಳಿಗಳ ಜೋಡಣೆಯ ಪ್ರದರ್ಶನವನ್ನು ಆಯೋಜಿಸಲಾಗಿದೆ. ಉತ್ತಮ ಗುಣಮಟ್ಟದ ಹೂವು, ಅಲಂಕಾರಿಕ ಗಿಡ ಹಾಗೂ ತೋಟಗಾರಿಕೆಗೆ ಪೂರಕ ಪರಿಕರಗಳನ್ನು ತಲುಪಿಸಲು ವಿವಿಧ ಖಾಸಗಿ ನರ್ಸರಿಗಳ ಮೂಲಕ ಮಾರಾಟ ಕೇಂದ್ರವನ್ನು ತೆರೆಯಲಾಗಿದೆ. ಗುಲಾಬಿ ಹೂಗಳನ್ನು ಬಳಸಿ ಎತ್ತಿನ ಗಾಡಿಯನ್ನು ನಿರ್ಮಿಸಲಾಗಿದೆ.  ಪಾಟ್ ಗಳಲ್ಲಿ ತರಕಾರಿಗಳನ್ನು ಬೆಳೆಯಲಾಗಿದ್ದು ಪ್ರದರ್ಶನಕ್ಕಿರಿಸಲಾಗಿದೆ. ಅಲ್ಲದೇ ತರಕಾರಿ ಬೀಜಗಳನ್ನು ಮಾರಾಟಕ್ಕಿರಿಸಲಾಗಿದೆ. ವಿಶೇಷ ಮೆರಗು ನೀಡಲು ಲೇಸರ್ ಶೋ ಏರ್ಪಡಿಸಲಾಗಿದೆ. ಅಷ್ಟೇ ಅಲ್ಲದೇ ಸಂಗೀತ ಕಾರಂಜಿಯು ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಮಕ್ಕಳಿಗೆ ಆಟವಾಡಲು ಟೊರಟೊರವನ್ನು ಅಳವಡಿಸಲಾಗಿದೆ.

ಪುಷ್ಪಪ್ರಿಯರು ಐಫೆಲ್ ಟವರ್, ಎತ್ತಿನಗಾಡಿ, ಸೋಮನಾಥ ದೇವಾಲಯ ಸುಂದರ ಹೂವಿನ ಗಿಡಗಳ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡು ಬಂತು. ಹೂವಿನ ಅಂದಕ್ಕೆ ಮರುಳಾಗಿ ತಾಮುಂದು ತಾಮುಂದು ಎಂದು ಎಲ್ಲರೂ ತಮ್ಮ ಪುಟ್ಟ ಪುಟ್ಟ ಕ್ಯಾಮರಾಗಳಲ್ಲಿ ಹೂವಿನ ಸೌಂದರ್ಯವನ್ನು ಸೆರೆಹಿಡಿಯುತ್ತಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: