ಪ್ರಮುಖ ಸುದ್ದಿಮೈಸೂರು

ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ : ರಾಜಮ್ಮ ಕೇಶವಮೂರ್ತಿ ಅವರಿಗೆ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ

ಮೈಸೂರು,ಸೆ.21:- ಮೈಸೂರು ದಸರಾ ಮಹೋತ್ಸವದಲ್ಲಿ ಸಂಗೀತ ಮತ್ತು ನೃತ್ಯ ಪ್ರಿಯರ ನೆಚ್ಚಿನ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮಗಳ  ಉದ್ಘಾಟನೆ ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅರಮನೆ ಆವರಣದಲ್ಲಿ ಚಾಲನೆ ನೀಡಿದರು.

ವಿದೂಷಿ ರಾಜಮ್ಮ ಕೇಶವಮೂರ್ತಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ನೀಡಿ ಗೌರವಿಸಿದರು. ಬಳಿಕ ಮಾತನಾಡಿದ ಅವರು  ರಾಜಮ್ಮ ಕೇಶವಮೂರ್ತಿ ದೀರ್ಘ ಕಾಲ ಸಂಗೀತ ಕ್ಷೇತ್ರಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 85 ವರ್ಷ ಆಗಿದ್ದರೂ ಅವರ ಕಂಠಸಿರಿ ಅದ್ಭುತ ವಾಗಿದೆ. ಮಾಧುರ್ಯವಾಗಿದೆ. ಸರ್ಕಾರ ಹೊಸ ಸಾಂಸ್ಕೃತಿಕ ನೀತಿಯನ್ನು ಪ್ರಕಟಿಸಿದ್ದು, ನೀತಿಯ ಪ್ರಕಾರ ಈ ಹಿಂದೆ ಪ್ರಶಸ್ತಿ ಗೆ ನೀಡುತ್ತಿದ್ದ 3 ಲಕ್ಷ ರೂ. ನಗದನ್ನು 5 ಲಕ್ಷ ರೂ. ಗೆ ಹೆಚ್ಚಿಸಿದೆ. ಅದರಂತೆ ಮೊದಲ ಬಾರಿಗೆ ಈ ಬಾರಿ ರಾಜಮ್ಮ ಕೇಶವಮೂರ್ತಿ ಅವರಿಗೆ ನೀಡಲಾಗಿದೆ. ಅವರ ಇಡೀ ಕುಟುಂಬವೇ ಸಂಗೀತ ಮಯವಾಗಿದೆ. ಮಕ್ಕಳು, ಮೊಮ್ಮಕ್ಕಳು ಕೂಡ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಕಲಾ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ನನಗೆ ಸಂಗೀತದ ಬಗ್ಗೆ ಜ್ಞಾನವಿಲ್ಲ. ಆದರೆ ಸಂಗೀತ ಕೇಳಿ ಆನಂದ ಪಡುತ್ತೇನೆ. ನಾನು ಹುಡುಗನಾಗಿದ್ದಾಗ ಜಾನಪದ ನೃತ್ಯ ಕಲಿಯಲು ಹೋಗುತ್ತಿದ್ದೆ. ಹೀಗಾಗಿ ಜಾನಪದ ಹಾಡುಗಳನ್ನು ಹಾಡುತ್ತೇನೆ. ಸಂಗೀತ ಕೇಳುವ ಆಸಕ್ತಿ, ಹವ್ಯಾಸವಿದೆ ಎಂದರು.

ವಿದ್ವಾನ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಜಮ್ಮ ಕೇಶವಮೂರ್ತಿ ಇದು ನನ್ನ ಜೀವನದ ಅತ್ಯುನ್ನತ ಕ್ಷಣ. ಅತ್ಯುನ್ನತ ಕಲಾ ಪ್ರಶಸ್ತಿಗಳಲ್ಲಿ ಒಂದಾದ ವಿದ್ವಾನ್ ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕೆ ನಾನು ಚಿರಋಣಿ. ಕಲಾವಿದನಿಗೆ ಇದಕ್ಕಿಂತ ಮತ್ತೊಂದು ಸಂತೋಷ ವಿಲ್ಲ. ಯಾವ ಶಿಫಾರಸು ಇಲ್ಲದೆ ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿದೆ. ದೇಶದ ಯಾವ ಸರ್ಕಾರ ಗಳು ನೀಡದ ಪ್ರಶಸ್ತಿ ಯನ್ನು ಸರ್ಕಾರ ಕಲಾವಿದರಿಗೆ ನೀಡಿ ಗೌರವಿಸುತ್ತಿದೆ. ರಾಜ್ಯ ಸರ್ಕಾರ ದೇಶದ ಅತ್ಯಂತ ಉತ್ತಮ ಸರ್ಕಾರ. ಸರ್ಕಾರ ಹೀಗೆ ಕಲಾವಿದರಿಗೆ ಪ್ರಶಸ್ತಿ ಗಳನ್ನು ನೀಡುವ ಮೂಲಕ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ನನ್ನ ಕೊನೆ ಆಸೆ ಇರುವವರೆಗೂ ಕಲಾ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತೇನೆ ಎಂದರು. ರಾಜಮ್ಮ ಕೇಶವಮೂರ್ತಿ ಅವರಿಗೆ 5 ಲಕ್ಷ ರೂ.ಗಳ ನಗದು ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಮಾತಿಗೂ ಮುನ್ನ ಮಾಣಿಕ್ಯ ವೀಣಾಂ ಉಪಲಾಲಯಂತೀಂ ಮದಾಲಸಾಂ ಮಂಜುಲ ವಾಗ್ವಿಲಾಸಾಂ ಗೀತೆಯನ್ನು ಹಾಡಿ ಜನಮನ ಸೂರೆಗೊಂಡರು. ಕಾರ್ಯಕ್ರಮಕ್ಕೂ ಮುನ್ನ ನಾದಸ್ವರ ನುಡಿಸಿದ ವಿ.ಯದುಕುಮಾರ್ ಮತ್ತು ತಂಡದ ನಾದಸ್ವರ ಕಲಾವಿದರಿಗೆ ದಸರಾ ಸಾಂಸ್ಕೃತಿಕ ಉಪ ಸಮಿತಿ ಅದ್ಯಕ್ಷೆ ಮೋದಾಮಣಿ ಪ್ರಮಾಣ ಪತ್ರ ವಿತರಿಸಿದರು.

ಈ ಸಂದರ್ಭ ದಲ್ಲಿ ನಿತ್ಯೋತ್ಸವ ಕವಿ ಪ್ರೊ.ನಿಸಾರ್ ಅಹಮದ್, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಉಮಾಶ್ರೀ, ತನ್ವೀರ್ ಸೇಠ್, ಡಾ. ಎಂ.ಸಿ.ಮೋಹನ ಕುಮಾರಿ (ಗೀತಾ ಮಹದೇವ ಪ್ರಸಾದ್), ಶಾಸಕ ಎಂ.ಕೆ.ಸೋಮಶೇಖರ್, ಮಹಾಪೌರ ಎಂ.ಜೆ.ರವಿಕುಮಾರ್, ಉಪಮಹಾಪೌರರಾದ ರತ್ನ ಲಕ್ಮಣ್, ಡಾ.ಯತೀಂದ್ರ ಸಿದ್ದರಾಮಯ್ಯ, ಮಲ್ಲಿಗೆ ವೀರೇಶ್, ಎಚ್.ಎ.ವೆಂಕಟೇಶ್, ಮೋದಾಮಣಿ ಇತರರು ಉಪಸ್ಥಿತರಿದ್ದರು.         (ಎಂ.ಎನ್,ಎಸ್.ಎಚ್)

Leave a Reply

comments

Related Articles

error: