ಮೈಸೂರು

ಓದುಗರಿಗೆ ತೆರದುಕೊಂಡ ಪುಸ್ತಕ ಮೇಳ

ಮೈಸೂರು, ಸೆ.೨೧: ದಸರಾ ಮಹೋತ್ಸವದ ಬಾಗವಾಗಿ ಕನ್ನಡ ಪುಸ್ತಕ ಪ್ರಧಿಕಾರ ನಗರದ ಕಾಡಾ ಕಚೇರಿ ಆವರಣದಲ್ಲಿ ಪುಸ್ತಕ ಮೇಳ ಆಯೋಜಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಉದ್ಘಾಟಿಸಿದರು.
ಪ್ರತಿಯೊಂದು ಮಳಿಗೆಗಳಿಗೆ ಭೇಟಿ ನೀಡಿ ಪುಸ್ತಕಗಳನ್ನು ಕುತೂಹಲದಿಂದ ವೀಕ್ಷಿಸಿದರು ಹಾಗೂ ಖ್ಯಾತ ವಿಜ್ಞಾನ ಲೇಖಕ ಟಿ. ಆರ್. ಅನಂತರಾಮು ಅವರು ಸಂಪಾದಿಸಿರುವ ವಿಜ್ಞಾನದ ಹೆದ್ದಾರಿಯಲ್ಲಿ ಮಹಾತಿರುವುಗಳು ಪುಸ್ತಕವನ್ನು ೮೦೦ ರೂ ಕೊಟ್ಟು ಖರೀದಿ ಮಾಡಿದರು. ಬಳಿಕ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪುಸ್ತಕಗಳನ್ನು ಹೊರತರುವ ಮೂಲಕ ಹಾಗೂ ತಾಂತ್ರಿಕವಾಗಿ ಸಿದ್ದಪಡಿಸಿರುವ ಕಣಜ ಅಗಾದ ವಿಷಯ ವಸ್ತುವನ್ನು ಜನತೆಗೆ ಒದಗಿಸಿದೆ. ಮೊಬೈಲ್ ಆಪ್ ನ ಮೂಲಕ ಕೂಡ ಓದಲು ಲಭ್ಯವಿದೆ ಎಂದು ತಿಳಿಸಿದರು. ನಂತರ ಲೇಖಕಿ ಕವಿತಾ ರೈ ಅವರ ಕಥನ ರಾಜಕಾರಣ ಮತ್ತು ನಾಟಿ ಓಟ- ಕೊಡಗಿನ ಕಥೆಗಳು ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು.
ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರ ಭೂಪತಿ ಮಾತನಾಡಿ, ಮೇಳದಲ್ಲಿ ಮೊದಲ ಬಾರಿ ರಚನಾತ್ಮಕ ಚಟುವಟಿಕೆಗಳಾದ ಕವಿಗೋಷ್ಠಿ, ವಿಚಾರ ಸಂಕಿರಣ ಮತ್ತು ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಪುಸ್ತಕ ಮೇಳದಲ್ಲಿ ೫೧ ಪುಸ್ತಕ ಮಳಿಗೆಗಳು ಇದ್ದು, ಏಳು ಸರ್ಕಾರದ ಅಂಗ ಸಂಸ್ಥೆಗಳು, ಕರ್ನಾಟಕ ಜನಪದ ವಿಶ್ವವಿದ್ಯಾಲಯ ಪುಸ್ತಕ ಮಳಿಗೆ ತೆರದಿದೆ. ಮುದೋಳ, ಶಿರಸಿ, ಬಂಟ್ವಾಳ, ಮೈಸೂರು ಮತ್ತು ಬೆಂಗಳೂರಿನ ಪ್ರಕಾಶಕರು ಭಾಗವಹಿಸಿದ್ದಾರೆ.
ಪುಸ್ತಕ ಮೇಳ ಬೆಳಗ್ಗೆ ೧೦.೩೦ ರಿಂದ ರಾತ್ರಿ ೮ ಗಂಟೆವರೆಗೂ ತರೆದಿರುತ್ತದೆ. ಪುಸ್ತಕ ಪ್ರೇಮಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೆಶಕ ಎನ್.ಆರ್.ವಿಶುಕುಮಾರ್, ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರ ಭೂಪತಿ ಹಾಗೂ ಲೇಖಕಿ ಕವಿತಾ ರೈ ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: