ಕರ್ನಾಟಕ

ಬಹುಮಾನಕ್ಕಾಗಿ ದಸರಾ ಮಾಡಬೇಡಿ : ಸುನಿಲ್ ಸುಬ್ರಮಣಿ ಕಿವಿಮಾತು

ರಾಜ್ಯ(ಮಡಿಕೇರಿ) ಸೆ.21 :- ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುತ್ತಿರುವ ಮಡಿಕೇರಿ ದಸರಾದಲ್ಲಿ ದಶ ಮಂಟಪಗಳ ಬಹುಮಾನ ಘೋಷಣೆಯ ಸಂದರ್ಭ ಅಪಸ್ವರಗಳು ಕೇಳಿ ಬರುತ್ತಿದ್ದು, ಕೇವಲ ಬಹುಮಾನಕ್ಕಾಗಿ ದಸರಾ ಮಾಡಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಸಲಹೆ ನೀಡಿದ್ದಾರೆ.

ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀಕೋಟೆ ಮಾರಿಯಮ್ಮ ದೇವಾಲಯದ ಬಳಿ ನಿರ್ಮಿಸಲಾಗಿರುವ ಶ್ರೀಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದಶಮಂಟಪಗಳ ಬಹುಮಾನ ಘೋಷಣೆಯ ಸಂದರ್ಭ ಅಸಮಾಧಾನದ ವಾತಾವರಣ ಸೃಷ್ಟಿಯಾಗುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಈ ರೀತಿಯ ಬೆಳವಣಿಗೆಗೆ ಅವಕಾಶ ನೀಡದೆ ಎಲ್ಲರೂ ಒಗ್ಗಟ್ಟಿನಿಂದ ದೇವರ ಕಾರ್ಯ ಮಾಡುವ ಮೂಲಕ ಮಡಿಕೇರಿ ದಸರಾವನ್ನು ಅರ್ಥಗರ್ಭಿತಗೊಳಿಸಬೇಕೆಂದು ಕಿವಿಮಾತು ಹೇಳಿದರು.

ನಗರದ ನಾಲ್ಕು ಶಕ್ತಿ ದೇವತೆಗಳ ಕರಗಗಳಿಗೆ ಸರಕಾರದ ಅನುದಾನದ ಮೂಲಕ ತಲಾ ಎರಡು ಲಕ್ಷ ರೂ. ಗಳನ್ನು ನೀಡಲಾಗುವುದು ಎಂದು ತಿಳಿಸಿದರು. ಶ್ರೀ ಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿಯ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ವೀಣಾಅಚ್ಚಯ್ಯ, ಕೊಡಗಿನ ಎಲ್ಲಾ ಜನರು 9 ದಿನಗಳ ಕಾಲ ದಸರಾ ಉತ್ಸವವನ್ನು ಶ್ರದ್ಧಾಭಕ್ತಿ ಮತ್ತು ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ದಸರಾ ಅನುದಾನದ ಬಗ್ಗೆ ಪ್ರತಿ ವರ್ಷ ಗೊಂದಲ ಸೃಷ್ಟಿಯಾಗುತ್ತಿದ್ದು, ಮುಂದಿನ ಸಾಲಿನಲ್ಲಿ ಎರಡು ತಿಂಗಳು ಮುಂಚಿತವಾಗಿ ಸರಕಾರದ ಬಳಿ ಅನುದಾನ ಕೋರುವುದು ಸೂಕ್ತವೆಂದು ಸಲಹೆ ನೀಡಿದರು.

ಶ್ರೀಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿಯ ಅಧ್ಯಕ್ಷ ಮಂಡೀರ ಸದಾ ಮುದ್ದಪ್ಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ನಗರಸಭಾ ಅಧ್ಯಕ್ಷ ಕಾವೇರಮ್ಮ ಸೋಮಣ್ಣ, ಉಪಾಧ್ಯಕ್ಷ ಟಿ. ಎಸ್.ಪ್ರಕಾಶ್, ನಗರಸಭಾ ಪೌರಯುಕ್ತರಾದ ಶುಭಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚುಮ್ಮಿ ದೇವಯ್ಯ, ನಗರಸಭಾ ಸದಸ್ಯ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: