
ಕರ್ನಾಟಕ
ವಾಣಿಜ್ಯೋದ್ಯಮಿಗಳ ಸಹಕಾರ ಸಂಘದ ಮಹಾಸಭೆ : ಸಂಘದ ಅಭ್ಯುದಯಕ್ಕೆ ಕೈಜೋಡಿಸಲು ಗಣೇಶ್ ಮನವಿ
ರಾಜ್ಯ(ಮಡಿಕೇರಿ) ಸೆ.21 :- ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘ 2016-17ನೇ ಸಾಲಿನಲ್ಲಿ 39.72 ಲಕ್ಷ ರೂ. ಲಾಭ ಗಳಿಸಿದ್ದು, ಸಂಘವನ್ನು ಮತ್ತಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ವಾಣಿಜ್ಯೋದ್ಯಮಿಗಳು ಹಾಗೂ ವರ್ತಕರು ಸಹಕರಿಸಬೇಕೆಂದು ಸಂಘದ ಅಧ್ಯಕ್ಷ ಕೆ.ಎಂ.ಗಣೇಶ್ ಮನವಿ ಮಾಡಿದ್ದಾರೆ.
ನಗರದಲ್ಲಿ ನಡೆದ ಸಂಘದ 16 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. 2017 ಮಾರ್ಚ್ 31ಕ್ಕೆ ವಿವಿಧ ಠೇವಣಿಗಳಿಂದ 62.06 ಕೋಟಿ ಠೇವಣಿ ಸಂಗ್ರಹಿಸಲಾಗಿದ್ದು, 8.58 ಕೋಟಿ ವಿವಿಧ ಸಾಲಗಳನ್ನು ನೀಡಲಾಗಿದೆ. ಪ್ರಸ್ತುತ ವರ್ಷದ ಮಾರ್ಚ್ ಅಂತ್ಯಕ್ಕೆ ಶೇ.93 ರಷ್ಟು ಸಾಲ ವಸೂಲಾತಿಯಾಗಿದೆ ಎಂದು ಗಣೇಶ್ ಮಾಹಿತಿ ನೀಡಿದರು.
1822 ಸದಸ್ಯರನ್ನು ಹೊಂದಿರುವ ಸಂಘ 62.03 ಲಕ್ಷ ರೂ. ಪಾಲು ಬಂಡವಾಳವನ್ನು ಸಂಗ್ರಹಿಸಿದೆ. 2014-15ನೇ ಸಾಲಿನಲ್ಲಿ ನಗರದ ಕೊಹಿನೂರು ರಸ್ತೆಯಲ್ಲಿ ಸಂಘ ಸ್ವಂತ ಕಟ್ಟಡವೊಂದನ್ನು ಖರೀದಿಸಿದೆ. ಮೇಲಂತಸ್ತಿನಲ್ಲಿ ಸಭೆ ಸಮಾರಂಭಗಳಿಗೆ ಅನುಕೂಲ ಕಲ್ಪಿಸಲಾಗುತ್ತಿದೆ.
ಸಭೆಯಲ್ಲಿ ನಿರ್ದೇಶಕರುಗಳಾದ ಎಸ್.ಐ. ಮುನೀರ್ ಅಹಮ್ಮದ್, ಎಂ.ಪಿ. ಕಾವೇರಪ್ಪ, ಎಂ.ಇ. ಅಬ್ದುಲ್ ರಹೀಂ, ಎಂ. ಬಿಜೋಯ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)