
ಕರ್ನಾಟಕ
ಸೆ.24 :ಮಾಜಿ ಸೈನಿಕರ ಸೌಹಾರ್ದ ಕೂಟ
ರಾಜ್ಯ(ಮಡಿಕೇರಿ) ಸೆ.21 :- ಮಾಜಿ ಸೈನಿಕರ ಶ್ರೇಯೋಭಿವೃದ್ಧಿಗಾಗಿ ಮತ್ತು ಯುವ ಜನತೆಯನ್ನು ಸೈನ್ಯಕ್ಕೆ ಸೇರುವಂತೆ ಪ್ರೇರೇಪಿಸುವುದಕ್ಕಾಗಿ ಮಡಿಕೇರಿ ಮಾಜಿ ಸೈನಿಕರ ಸಂಘವನ್ನು ಮತ್ತಷ್ಟು ಸದೃಢಗೊಳಿಸುವ ಉದ್ದೇಶದಿಂದ ಸೆ.24 ರಂದು ಸೌಹಾರ್ದ ಕೂಟವನ್ನು ಆಯೋಜಿಸಿರುವುದಾಗಿ ಸಂಘದ ಅಧ್ಯಕ್ಷ ಕೆ.ಎ.ಆನಂದ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2011ರಲ್ಲಿ ಸ್ಥಾಪನೆಯಾದ ಮಡಿಕೇರಿ ನಗರದ ಸಂಘ ಸುಮಾರು 150 ಮಂದಿ ಸದಸ್ಯರನ್ನು ಹೊಂದಿದ್ದು, ಸದಸ್ಯತ್ವ ಅಭಿಯಾನದ ಮೂಲಕ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲಾಗುವುದೆಂದರು. ನಿವೃತ್ತಿ ಹೊಂದಿದ ಸೈನಿಕರನ್ನು ಒಗ್ಗೂಡಿಸಿ ಶ್ರೇಯೋಭಿವೃದ್ಧಿಗಾಗಿ ಚಿಂತನೆ ನಡೆಸಲು ಪ್ರತಿವರ್ಷ ನಡೆಸುವ ಸೌಹಾರ್ದ ಕೂಟ ಸಹಕಾರಿಯಾಗಿದೆ.
ಸೆ.24 ರಂದು ನಗರದ ಕಾವೇರಿ ಮಿನಿ ಹಾಲ್ನಲ್ಲಿ ನಡೆಯುವ ಸೌಹಾರ್ದ ಕೂಟದಲ್ಲಿ ವಿಶೇಷ ಅತಿಥಿಗಳಾಗಿ ಸೈನಿಕ ಪುನರ್ವಸತಿ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಲೆ.ಕ. ಗೀತಾ ಎಂ. ಶೆಟ್ಟಿ ಹಾಗೂ ವಿಶೇಷ ಆಹ್ವಾನಿತರಾಗಿ ಹೋಂ ಗಾರ್ಡ್ ಕಮಾಂಡೆಂಟ್ ಮೇಜರ್. ಎಸ್. ಚಿಂಗಪ್ಪ ಉಪಸ್ಥಿತರಿರುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಟಿ.ಸಿ.ಗಣಪತಿ, ಕಾರ್ಯದರ್ಶಿ ಎಂ.ಪಿ.ಕಾವೇರಿಯಪ್ಪ, ನಿರ್ದೇಶಕರುಗಳಾದ ಕೆ.ಪಿ.ಮುತ್ತಣ್ಣ, ಹೆಚ್.ಪಿ. ಚಂದ್ರು ಹಾಗೂ ಕೆ.ಪಿ.ಮ್ಯಾಥ್ಯು ಉಪಸ್ಥಿತರಿದ್ದರು