ಕರ್ನಾಟಕ

ಗುಣಮಟ್ಟದಿಂದ ಚಾಮರಾಜೇಶ್ವರ ರಥ ನಿರ್ಮಾಣ : ಸಭೆಯಲ್ಲಿ ತೀರ್ಮಾನ

ರಾಜ್ಯ(ಚಾಮರಾಜನಗರ) ಸೆ. 21 :- ಚಾಮರಾಜನಗರದ ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರ ರಥ ನಿರ್ಮಾಣ ಕಾರ್ಯವನ್ನು ಗುಣಮಟ್ಟದಿಂದ ನಿರ್ವಹಿಸುವಂತೆ  ಸಂಬಂಧಪಟ್ಟ ನಿರ್ಮಾಣಕಾರರಿಗೆ ಸೂಚನೆ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ.ರಾಮು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಥನಿರ್ಮಾಣ ಸಂಬಂಧ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರ ಸಮ್ಮುಖದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಜಿಲ್ಲಾಧಿಕಾರಿಯವರು ಮಾತನಾಡಿದರು. ರಥ ನಿರ್ಮಾಣ ಹಾಗೂ ಇದರ ಪೂರಕ ಕೆಲಸಗಳಿಗೆ ಒಟ್ಟು 1.20 ಕೋಟಿ ರೂ ರಥ ಅನುದಾನ ನಿಗಧಿಯಾಗಿದೆ. 1 ಕೋಟಿ ರೂ ವೆಚ್ಚದಲ್ಲಿ ರಥ ನಿರ್ಮಾಣ ಮಾಡಬೇಕಿದ್ದು ಉಳಿದ 20 ಲಕ್ಷ ರೂ ಅನುದಾನದಲ್ಲಿ ತೇರಿನ ಮನೆಯನ್ನು ನಿರ್ಮಿಸಬೇಕಿದೆ ಈ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ರಥ ನಿರ್ಮಿಸುವ ಸಂಬಂಧ ವಿವರವಾಗಿ ಚರ್ಚಿಸಲಾಯಿತು. ರಥ ನಿರ್ಮಾಣ ಕೆಲಸದಲ್ಲಿ ರಾಜೀಯಾಗುವ ಪ್ರಶ್ನೆಯೆ ಇಲ್ಲ. ಉತ್ತಮ ಗುಣಮಟ್ಟದ ಕೆತ್ತನೆ ನಿರ್ಮಾಣ ಕಾರ್ಯ ಮಾಡಲು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗುತ್ತದೆ. ಎಲ್ಲ ಸಾಂಪ್ರಾದಾಯಿಕ ವಿಧಾನಗಳನ್ನು ಅನುಸರಿಸುವಂತೆ ಸೂಚಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ.ರಾಮು ತಿಳಿಸಿದರು. ರಥನಿರ್ಮಾಣಕ್ಕೆ ಅಗತ್ಯವಿರುವ ಗುಣಮಟ್ಟದ ಮರ ಆಯ್ಕೆಯನ್ನು ಅರಣ್ಯಾಧಿಕಾರಿಗಳ ಸಹಕಾರ ಪಡೆದು ಮಾಡಲಾಗುತ್ತದೆ. ಇದಕ್ಕಾಗಿಯೆ ಪ್ರತ್ಯೇಕ ಸಮಿತಿಯನ್ನು ರಚನೆ ಮಾಡಲಾಗುತ್ತದೆ. ಗುಣಮಟ್ಟದ ವಸ್ತುಗಳನ್ನು ಬಳಸಲು ಸೂಚಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ರಥ ನಿರ್ಮಾಣ ಕಾರ್ಯವು ಇಲ್ಲಿಯೆ ನಡೆಯಬೇಕು. ಬೇರೆಕಡೆ ನಿರ್ಮಾಣ ಮಾಡಬಾರದು. ರಥ ಕೆಲಸವು ಪಾರದರ್ಶಕವಾಗಿರಬೇಕು. ರಥ ನಿರ್ಮಾಣ ಕಾರ್ಯವನ್ನು ಜನರು ವೀಕ್ಷಿಸಲು ಅವಕಾಶವಾಗಬೇಕು ಎಂದು ನಿರ್ಮಾಣ ಹೊಣೆ ನಿರ್ವಹಿಸಲಿರುವ ಸಂಸ್ಥೆಗೆ ತಿಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ರಾಮು ವಿವರಿಸಿದರು. ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಮಾತನಾಡಿ ಐತಿಹಾಸಿಕ ಚಾಮರಾಜೇಶ್ವರ ರಥ ನಿರ್ಮಾಣ ಕೆಲಸವು ಶೀಘ್ರವಾಗಿ ಆರಂಭವಾಗಬೇಕು. ಜನರ ನಿರೀಕ್ಷೆಗೆ ಅನುಗುಣವಾಗಿ ಕೆಲಸ ಪೂರ್ಣವಾಗಬೇಕು. ಈ ನಿಟ್ಟಿನಲ್ಲಿ ವಹಿಸಬೇಕಿರುವ ಪ್ರಕ್ರಿಯೆ ತ್ವರಿತವಾಗಿ ನಡೆಯಬೇಕೆಂದು ತಿಳಿಸಿದರು. ಇದೇ ವೇಳೆ ಸಭೆಯಲ್ಲಿ ಹಾಜರಿದ್ದ ಮುಖಂಡರು ದೇವಾಲಯದ ಸುತ್ತಮುತ್ತಲ ಪರಿಸರವು ಸ್ವಚ್ಚವಾಗಿಡಲು ಅಗತ್ಯ ಕ್ರಮವಹಿಸಬೇಕು. ಮುಂಬರುವ ಆಷಾಢ ಮಾಸದ ರಥೋತ್ಸವ ಸಂದರ್ಭದ ವೇಳೆಗೆ ನೂತನ ರಥ ನಿರ್ಮಾಣವಾಗಬೇಕು ಎಂಬುದು ಸೇರಿದಂತೆ ಇತರೆ ಸಲಹೆಗಳನ್ನು  ಸಭೆಯ ಮುಂದಿಟ್ಟರು.

ತಹಶೀಲ್ದಾರ್ ಪುರಂದರ್, ನಗರಸಭೆ ಆಯುಕ್ತರಾದ ರಾಜಣ್ಣ, ಚಾಮರಾಜೇಶ್ವರ ದೇವಾಲಯದ ಕಾರ್ಯನಿರ್ವಾಹಕಾಧಿಕಾರಿ ಮಂಜೇಶ್, ಅರ್ಚಕರಾದ ನಾಗರಾಜ ದೀಕ್ಷಿತ್, ಮುಖಂಡರಾದ ಸುದರ್ಶನ್‍ಗೌಡ, ರಾಜುನಾಯಕ, ಚಾ.ರಂ.ಶ್ರೀನಿವಾಸಗೌಡ, ಸಿ.ಎಂ.ಮಂಜುನಾಥ ಗೌಡ, ಸುರೇಶ್ ನಾಯಕ,  ಪ್ರಭುಸ್ವಾಮಿ, ಗು.ಪುರುಷೋತ್ತಮ್, ಎಂ.ನಾಗೇಶ್, ಭಾಸ್ಕರ್, ಶಿವಣ್ಣ,  ಇತರರು ಸಭೆಯಲ್ಲಿ ಉಪಸ್ಥಿತರಿದ್ದರು. (ಆರ್.ವಿ.ಎಸ್,ಎಸ್.ಎಚ್)

Leave a Reply

comments

Related Articles

error: