ಪ್ರಮುಖ ಸುದ್ದಿಮೈಸೂರು

ನಾಟ್ಯ ಮಯೂರಿಯ ನೃತ್ಯಕ್ಕೆ ಮನಸೋತ ಪ್ರೇಕ್ಷಕರು

ಮೈಸೂರು,ಸೆ.22:- ರವಿ ಜಾರಿ ಆಗಸದಲ್ಲಿ ಕತ್ತಲೆ ಆವರಿಸಿತ್ತು. ಹಕ್ಕಿಗಳೆಲ್ಲ ತಮ್ಮ ತಮ್ಮ ಗೂಡು ಸೇರುತ್ತಿದ್ದವು, ತುಂತುರು ಮಳೆಹನಿಗಳು, ಅದರಜೊತೆ ಮಂದ ಮಾರುತ ದೇಹಕ್ಕೆ ಶೀತವನ್ನುಂಟು ಮಾಡುತ್ತಿದ್ದರೆ, ನವಿಲು ಕೂಡ ನಾಚುವಂತೆ ನರ್ತಿಸುವ ಅವರ ನೃತ್ಯ ಮೈರೋಮಾಂಚನಗೊಳಿಸಿ ಬೆಚ್ಚಗಾಗಿಸಿತ್ತು.

ಇವೆಲ್ಲ ಕಂಡು ಬಂದಿದ್ದು ಅರಮನೆ ಆವರಣದಲ್ಲಿ ದಸರಾ ಮಹೋತ್ಸವ ಪ್ರಯುಕ್ತ ಸಜ್ಜುಗೊಳಿಸಲಾದ ವೇದಿಕೆಯಲ್ಲಿ. ಅವರು ವೇದಿಕೆ ಪ್ರವೇಶಿಸುತ್ತಿದ್ದಂತೆ ಪ್ರೇಕ್ಷಕರಿಂದ ಕರತಾಡನ, ಶಿಳ್ಳೆ, ಚಪ್ಪಾಳೆಗಳ ಸುರಿಮಳೆಯೇ ಆಗಿತ್ತು. ಅವರು ಪ್ರದರ್ಶಿಸಿದ ನೃತ್ಯ ರೂಪಕ ಅತ್ಯದ್ಭುತವಾಗಿ ಮೂಡಿ ಬಂದಿತ್ತು. ಅಯ್ಯೋ ಆಗಲೆ ಮುಗಿದು ಹೋಯಿತಾ..? ಇನ್ನೂ ಸ್ವಲ್ಪ ಹೊತ್ತು ಇದ್ದಿದ್ದರೆ ಎಂದು ಹಲವರು ಅಲ್ಲಿಯೇ ಮಾತನಾಡಿಕೊಳ್ಳುತ್ತಿರುವುದು ಕೇಳಿ ಬಂತು. ಅಂತಹ ಅದ್ಭುತ ನೃತ್ಯ ಪ್ರದರ್ಶನ ನೀಡಿದವರು ಯಾರೆಂದರೆ ನಾಟ್ಯ ಮಯೂರಿಯೆಂದು ಗುರುತಿಸಿಕೊಂಡ ನಟಿ, ಕಲಾವಿದೆ ಸುಧಾ ಚಂದ್ರನ್.

ಅವರು ತನ್ನ ಕಾಲನ್ನು ಅಪಘಾತದಲ್ಲಿ ಕಳೆದುಕೊಂಡಿದ್ದು, ಕಾಲಿನ ಬದಲು ಮರದ ಕಾಲನ್ನು ಜೋಡಿಸಲಾಯಿತು. ಮೊದಲು ವ್ಯಥೆಪಟ್ಟರೂ ಬಳಿಕ ಅದಕ್ಕೆ ಹೊಂದಿಕೊಂಡರು. ದಿನಕಳೆದಂತೆ ಆತ್ಮವಿಶ್ವಾಸ ಬೆಳೆಸಿಕೊಂಡರು. ಕೃತಕ ಕಾಲನ್ನು ಅಳವಡಿಸಿಕೊಂಡರೂ ನೃತ್ಯ ಕಲಾ ಲೋಕದಲ್ಲಿ ಅತ್ಯದ್ಭುತ ಸಾಧನೆಯನ್ನು ಗೈದು ಎಲ್ಲರಿಗೂ ಮಾದರಿಯಾಗಿದ್ದಾರೆ. (ಎಸ್.ಎಚ್)

Leave a Reply

comments

Related Articles

error: