ಪ್ರಮುಖ ಸುದ್ದಿಮೈಸೂರು

ಜಗನ್ಮೋಹನ ಅರಮನೆಯ ತುಂಬ ಚಿಣ್ಣರ ಕಲರವ : ಗಮನ ಸೆಳೆದ ಡ್ರಾಮಾ ಜ್ಯೂನಿಯರ್ಸ್, ಸರಿಗಮಪ ಚಿಣ್ಣರು; ಮಕ್ಕಳ ದಸರಾಕ್ಕೆ ಚಾಲನೆ

ಮೈಸೂರು,ಸೆ.22:- ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ  ನಗರದ ಜಗನ್ಮೋಹನ ಅರಮನೆಯಲ್ಲಿ ಮಕ್ಕಳ ದಸರಾಕ್ಕೆ ಚಾಲನೆ ನೀಡಲಾಯಿತು.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಮಕ್ಕಳ ದಸರಾಗೆ ಚಾಲನೆ ನೀಡಿದರು. ಬಳಿಕ ವೇದಿಕೆಯ ಕಾರ್ಯಕ್ರಮವನ್ನು ದೀಪಬೆಳಗಿಸುವ ಮೂಲಕ  ಉದ್ಘಾಟಿಸಲಾಯಿತು.  ಬಳಿಕ ಮಾತನಾಡಿದ ಸಚಿವರು ಈ ಮಕ್ಕಳ ದಸರಾ ಒಂದು ವಿಶಿಷ್ಟ ಕಾರ್ಯಕ್ರಮ. ಶಿಕ್ಷಣ ಕಲಿತು ವಿದ್ಯಾರ್ಧಿಗಳು ಸಾಧನೆಯತ್ತ ಸಾಗಬೇಕು.ತಂದೆ ತಾಯಿಗಳನ್ನು ಖುಷಿ ಪಡಿಸೋದಕ್ಕೆ ಮಾತ್ರ ಸಾಧನೆ ಮಾಡಬಾರದು. ಸಮುದಾಯ ನಿಮ್ಮತ್ತ ನೋಡುವಂತೆ ಸಾಧನೆ ಮಾಡಬೇಕು .ದಸರೆಗೆ ಆಗಮಿಸಿದ ಮಾವುತರು ಹಾಗೂ ಕಾವಾಡಿಗರ ಮಕ್ಕಳು ಕೂಡ ಅವರ ತಾಯಿ ತಂದೆ ಜೊತೆ ಅರಮನೆಗೆ ಆಗಮಿಸಿದ್ದಾರೆ ಅವರು ಕೂಡ ಈ ಬಾರಿ ಸಾಂಸ್ಕೃತಿಕ ನೃತ್ಯ ಮಾಡುತ್ತಿದ್ದಾರೆ. ದಸರಾ ಒಂದು ನಗರಕ್ಕೆ ಸೀಮಿತ ಅಲ್ಲ.ಇದು ನಾಡ ಹಬ್ಬ ಜನರ ಹಬ್ಬ ಎಂದು ತಿಳಿಸಿದರಲ್ಲದೇ,ನೆರೆದಿದ್ದ   ಮಕ್ಕಳಿಗೆ ದಸರಾ ಹಬ್ಬಕ್ಕೆ ಶುಭಾಶಯ ಕೋರಿದರು.

ಡ್ರಾಮ ಜೂನಿಯರ್ಸ್ ಖ್ಯಾತಿಯ ಮಹೇಂದ್ರ, ಆರಿಷಿ, ಅಮಿತ್ ಹಾಗೂ ಸರಿಗಮಪ ಜೂನಿಯರ್ಸ್ ನಲ್ಲಿ  ಪಾಲ್ಗೊಂಡಿದ್ದ ವೈಷ್ಣವಿ, ಕಿರುತೆರೆ ಬಾಲನಟಿ ಕಿನ್ನರಿ ಖ್ಯಾತಿಯ ದಿಶಾ ಮುಂತಾದವರು ಮಕ್ಕಳ ದಸರಾದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದರು.  ಈ ಸಂದರ್ಭ ಮಹೇಂದ್ರ ಮತ್ತು ಅಮಿತ್ ಮಾತುಕತೆ ನಡೆಸಿದ್ದರೆ ದಿಶಾ ಮಾತ್ರ ಗಂಭೀರವದನಳಾಗಿ ಕುಳಿತಿರುವುದು ಕಂಡು ಬಂತು. ಜಗನ್ಮೋಹನ ಅರಮನೆಯ ತುಂಬೆಲ್ಲ ಚಿಣ್ಣರ ಕಲರವ ಕೇಳಿ ಬಂದಿತ್ತು.

ಸರಿಗಮಪ ಖ್ಯಾತಿಯ ವೈಷ್ಣವಿ ಚೌಕ ಚಿತ್ರದ ಐ ಲವ್ ಯು ಅಪ್ಪ ಅಂತ ಹಾಡು ಹಾಡಿ ರಂಜಿಸಿದರು. ಡ್ರಾಮಾ ಜೂನಿಯರ್ ನ ಮಹೇಂದ್ರ ಖ್ಯಾತ ಚಿತ್ರ ನಟರ ಡೈಲಾಗ್ ಗಳನ್ನು ಹೇಳಿದರು. ವಾಗ್ದೇವಿ ಸಂಗೀತ ಶಾಲಾ ಮಕ್ಕಳಿಂದ ಸಮೂಹ ಗಾಯನ, ವಿವಿಧ ವೇಷ ಭೂಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ,  ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಮಕ್ಕಳಿಂದ ಸಮೂಹ ನೃತ್ಯ ನಡೆಯಿತು.

ಅರಮನೆ ಆವರಣದ ಟೆಂಟ್ ಶಾಲೆಯ ಮಾವುತ ಹಾಗೂ ಕಾವಾಡಿ ಮಕ್ಕಳಿಂದ ಕಿಂದರ ಜೋಗಿ ನಾಟಕ ಮತ್ತು ಸಮೂಹ ನೃತ್ಯ , ಏಕಪಾತ್ರಾಭಿನಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಿಂದ,   ಪ್ರೌಢಶಾಲಾ ವಿಭಾಗದವರಿಂದ,ಸಮೂಹ ನೃತ್ಯ ಕಾರ್ಯಕ್ರಮ ಜರುಗಿದವು. ಎರಡು ದಿಗಳ ಕಾಲ ನಡೆಯಲಿರುವ ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಚಿತ್ರಕಲೆ, ವಿವಿಧ ವೇಷಭೂಷಣ ಸ್ಪರ್ಧೆ, ಸಾಮೂಹಿಕ ನೃತ್ಯ, ಏಕಪಾತ್ರಾಭಿನಯ,ನಾಟಕ ಸ್ಪರ್ಧೆ, ಭರತ ನಾಟ್ಯ, ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ.

ಮೈಸೂರು  ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಿಂದ ವಿಜ್ಞಾನ ವಸ್ತು ಪ್ರದರ್ಶನವನ್ನು ಕೂಡಾ ಆಯೋಜಿಸಲಾಗಿದ್ದು, ವಿವಿಧ ಶಾಲೆಗಳಿಂದ ಭಾಗವಹಿಸಿದ ವಿದ್ಯಾರ್ಥಿಗಳು ಜಾಗತಿಕ ತಾಪಮಾನ, ಶಕ್ತಿಯು ಯಾವ ರೀತಿ ರೂಪಾಂತರಗೊಳ್ಳುತ್ತದೆ, ವಿದ್ಯುತ್ ಯಾವ ರೀತಿ ಉತ್ಪತ್ತಿಯಾಗುತ್ತದೆ ಎಂಬುದನ್ನು ಮಾದರಿಗಳ ಸಹಿತ ವಿವರಿಸುತ್ತಿದ್ದರು. ಕಾರ್ಯಕ್ರಮದಲ್ಲಿ ಮೇಯರ್ ಎಂ.ಜೆ.ರವಿಕುಮಾರ್ ಅಧ್ಯಕ್ಷರಾದ ಲತಾಮೋಹನ್,ಉಪಾಧ್ಯಕ್ಷರಾದ ರಾಣಿಪ್ರಭಾ, ನಗರ ಪಾಲಿಕೆ ಸದಸ್ಯ ಕೆ.ವಿ.ಮಲ್ಲೇಶ್, ಗಾಯಿತ್ರಿ, ಸವಿತಾ ಅನಿಲ್ ಕುಮಾರ್, ಹರೀಶ್ ಪ್ರಸಾದ್,ಪುಟ್ಟಮ್ಮ ಅರುಣ್ ಮಹದೇವಯ್ಯ ಮತ್ತಿತರರು ಉಪಸ್ಥಿತರಿದ್ದರು.

(ಕೆ.ಎಸ್,ಆರ್.ವಿ,ಎಸ್.ಎಚ್)

Leave a Reply

comments

Related Articles

error: