ಮೈಸೂರು

ಮೈಸೂರು ಕೋ-ಅಪರೇಟಿವ್ ಬ್ಯಾಂಕ್ ನ ಆಡಳಿತ ಮಂಡಳಿ ಅನರ್ಹ ಆದೇಶಕ್ಕೆ ತಡೆ

ಮೈಸೂರು,ಸೆ.22 :  ಮೈಸೂರು ಉಪವಿಭಾಗದ ಸಹಕಾರ ಸಂಘಗಳ ಉಪ ನಿಬಂಧಕರ ನ್ಯಾಯಾಲಯದಲ್ಲಿ ದಿ.ಮೈಸೂರು ಕೋ-ಅಪರೇಟಿವ್ ಬ್ಯಾಂಕ್ ನ ಪದಾಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ಮಾಜಿ ಮೇಯರ್ ಬಿ.ಕೆ.ಪ್ರಕಾಶ್ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬ್ಯಾಂಕಿನ ಪದಾಧಿಕಾರಿಗಳು ಆಡಳಿತ ಮಂಡಳಿ ಸದಸ್ಯರನ್ನು ಸಹಕಾರ ಸಂಘಗಳ ಸಹಕಾರ ನಿಬಂಧಕರು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಆದರೆ ಈ ಆದೇಶಕ್ಕೆ ಸೆ.21ರಂದು ಸಹಕಾರ ಸಂಘಗಳ ಉಪನಿಬಂಧಕರು ತಡೆಯಾಜ್ಞೆ ನೀಡಿದ್ದಾರೆ ಎಂದು ಹೇಳಿದರು.

ಈ ಹಿನ್ನಲೆಯಲ್ಲಿ ಸೆ.24ರಂದು ವಿಶೇಷಾಧಿಕಾರಿ ಅಧ್ಯಕ್ಷತೆಯಲ್ಲಿ ಜೆ.ಕೆ.ಮೈದಾನದ ಅಮೃತ ಮಹೋತ್ಸವ ಭವನದಲ್ಲಿ ಕರೆಯಲಾಗಿರುವ ಬ್ಯಾಂಕಿನ 111ನೇ ಸರ್ವ ಸದಸ್ಯರ ಸಭೆಯು ನನ್ನ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದರು.

ಬ್ಯಾಂಕಿನಿಂದ ವಜಾಗೊಂಡಿರುವ ಈಶ್ವರ್, ಬ್ಯಾಂಕಿನ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದ್ದು ನ್ಯಾಯಾಲಯದಲ್ಲಿ ಸುಳ್ಳು ಮೊಕದ್ದಮೆಯನ್ನು ಹೂಡಿದ್ದಾರೆ. ಈಗಾಗಲೇ ನ್ಯಾಯಾಲಯ 7-8 ಬಾರಿ ದಂಡ ವಿಧಿಸಿದ್ದರು ಬ್ಯಾಂಕಿನವರ ವಿರುದ್ಧ ಅಪಪ್ರಚಾರ ನಿಲ್ಲಿಸಿಲ್ಲ, ಹೀಗಾಗಿ ಮುಂದೆ ಈಶ್ವರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.

ಬ್ಯಾಂಕಿನ ಆಡಳಿತ ಮಂಡಳಿ ಪದಾಧಿಕಾರಿಗಳಾದ ಉಮಾಶಂಕರ್, ಎಸ್.ಬಿ.ಎಂ. ಮಂಜು, ಆರ್. ರವಿ ಕುಮಾರ್, ಸಿ.ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: