ಕರ್ನಾಟಕ

ಅಂಕಿತ ನಾಮ ಬದಲಾವಣೆ : ಮಾತೆ ಮಹಾದೇವಿ ವಿರುದ್ಧ ದಾವೆಗೆ ವೀರಶೈವ ಮಹಾಸಭಾ ನಿರ್ಧಾರ

ಬೆಂಗಳೂರು, ಸೆ.22 (ಪ್ರಮುಖ ಸುದ್ದಿ): ವಚನಕಾರ ಬಸವಣ್ಣನವರ ವಚನಗಳ ‘ಕೂಡಲಸಂಗಮ ದೇವ’ ಅಂಕಿತ ನಾಮವನ್ನು ಲಿಂಗದೇವ ಎಂದು ಬದಲಾವಣೆ ಮಾಡಲು ನ್ಯಾಯಾಲಯದ ಅಸಮ್ಮತಿಯಿದ್ದರೂ ಮತ್ತೆ ಬದಲಾವಣೆ ಮಾಡಿರುವ ಮಾತೆ ಮಹಾದೇವಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ಅಖಿಲ ಭಾರತ ವೀರಶೈವ ಮಹಾಸಭಾ ನಿರ್ಧರಿಸಿದೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ವೀರಶೈವ ಮಹಾಸಭಾ ಉಪಾಧ್ಯಕ್ಷ ಬಿ.ಎಸ್.ಸಚ್ಚಿದಾನಂದ ಮೂರ್ತಿ ಅವರು ಈ ವಿಷಯ ತಿಳಿಸಿದ್ದಾರೆ.

ಬಸವಣ್ಣನವರ ಕೂಡಲಸಂಗಮ ಅಂಕಿತ ನಾಮವನ್ನು ಲಿಂಗದೇವ ಎಂದು ಮುದ್ರಿಸಿರುವ ‘ಬಸವ ವಚನ ದೀಪ್ತಿ’ ಎಂಬ ಕೃತಿಯನ್ನು 1998ರಲ್ಲಿ ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತ್ತು. ಅದರ ವಿರುದ್ಧ ಮಾತೆ ಮಹಾದೇವಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಕೂಡ 2003ರಲ್ಲೇ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿತ್ತು. ಬುಧವಾರವಷ್ಟೇ ಸುಪ್ರಿಂಕೋರ್ಟ್ ಕೂಡ ಹೈಕೋರ್ಟ್ ಆದೇಶ ಎತ್ತಿ ಹಿಡಿದಿದೆ.

ಆದರೆ 2003ರಿಂದ ಈವರೆಗೆ ‘ಬಸವ ವಚನಾಮೃತ’ ಎಂಬ 10 ಸರಣಿ ಮಾಲಿಕೆಗಳಲ್ಲಿ ಬಸವಣ್ಣನವರ ವಚನಗಳನ್ನು ಅಂಕಿತ ನಾಮ ಬದಲಿಸಿ ಬಳಸಲಾಗಿದೆ. ಹೀಗಾಗಿ ಬಸವ ವಚನಾಮೃತ 10 ಸರಣಿ ಮಾಲಿಕೆಯಲ್ಲಿ ಮತ್ತೆ ಲಿಂಗದೇವ ನಾಮಾಂಕಿತ ಬಳಸಿರುವುದರ ವಿರುದ್ಧ ಮಾತೆ ಮಹಾದೇವಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದರು.

(ಎನ್.ಬಿ)

Leave a Reply

comments

Related Articles

error: