ಮೈಸೂರು

ನೇಣು ಬಿಗಿದುಕೊಂಡು ಪಿಯು ವಿದ್ಯಾರ್ಥಿ ಆತ್ಮಹತ್ಯೆ

ತಂದೆ ಪಟಾಕಿ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಮನನೊಂದು ಪಿಯುಸಿ ವಿದ್ಯಾರ್ಥಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಗೋಕುಲಂ 3ನೇ ಹಂತದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ರಾಜೇಶ್ ಎಂಬುವರ ಪುತ್ರ ಗೌರವ್ (16) ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ. ಮೈಸೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಓದುತ್ತಿದ್ದ ಗೌರವ್ ಮಂಗಳವಾರ ಪಟಾಕಿ ಕೊಡಿಸುವಂತೆ ಒತ್ತಾಯಿಸಿದ್ದ. ದೀಪಾವಳಿ ಹಬ್ಬವೇ ಮುಗಿದಿದೆ. ಈಗ ಎಂತಹ ಪಟಾಕಿ ಹೊಡೆಯುವುದು. ಸುಮ್ಮನೆ ಓದಿಕೋ ಎಂದು ತಂದೆ ರಾಜೇಶ್ ಗದರಿಸಿದ್ದರು ಎನ್ನಲಾಗಿದೆ.

ಅದಕ್ಕೆ ಪ್ರತಿಯಾಗಿ ಗೌರವ್ ಏರು ಧ್ವನಿಯಲ್ಲಿ ಮಾತನಾಡಿದ್ದರಿಂದ ಕೋಪಗೊಂಡ ತಂದೆ ಬೈದಿದ್ದಾರೆ. ಸಂಜೆ ಮನೆಯ ಕೊಠಡಿ ಸೇರಿಕೊಂಡ ಆತ ರಾತ್ರಿಯಾದರೂ ಬಾಗಿಲು ತೆಗೆಯದಿದ್ದಾಗ ಸಂಶಯಗೊಂಡ ಮನೆಯವರು ಕಿಟಕಿಯಿಂದ ನೋಡಿದಾಗ ಗೌರವ್ ಬೆಡ್ ಶೀಟ್ ನಿಂದ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ವಿವಿ ಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಹಜರು ನಡೆಸಿದ್ದಾರೆ. ರಾಜೇಶ್ ಅವರಿಗೆ ಗೌರವ್ ಏಕಮಾತ್ರ ಪುತ್ರ ಎನ್ನಲಾಗಿದೆ.

Leave a Reply

comments

Related Articles

error: