
ಪ್ರಮುಖ ಸುದ್ದಿಮೈಸೂರು
ಎಸ್.ಎಂ ಕೃಷ್ಣ ಅವರ ಅಳಿಯನ ಮನೆಯ ಮೇಲಿನ ಐಟಿ ದಾಳಿಯ ಬಗ್ಗೆ ನನಗೆ ಗೊತ್ತಿಲ್ಲ : ಸಿಎಂ ಸಿದ್ದರಾಮಯ್ಯ ಹಾರಿಕೆಯ ಉತ್ತರ
ಮೈಸೂರು, ಸೆ22:- ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಅಳಿಯನ ಮನೆಯ ಮೇಲಿನ ಐಟಿ ದಾಳಿಯ ಬಗ್ಗೆ ನನಗೆ ಗೊತ್ತಿಲ್ಲ, ನಾನು ಇಂದು ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯ ಪ್ರವಾಸಕ್ಕೆ ಹೋಗುತ್ತಿದ್ದೇನೆ ಎಂದು ಸಿಎಂ ಮಾಧ್ಯಮಗಳಿಗೆ ಹಾರಿಕೆಯ ಉತ್ತರ ನೀಡಿದ್ದಾರೆ.
ಗುರುವಾರ ದಸರಾ ಉದ್ಘಾಟನೆ ಮಾಡಿ ಮೈಸೂರಿನ ಟಿ.ಕೆ ಲೇಔಟ್ ಮನೆಯಲ್ಲಿ ವಾಸ್ತವ್ಯ ಹೂಡಿದ್ದ ಸಿಎಂ ಸಿದ್ದರಾಮಯ್ಯ ಶುಕ್ರವಾರ ಬೆಳಗ್ಗೆಯೇ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯ ಪ್ರವಾಸ ಹೊರಡುವ ಮುನ್ನ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಐಟಿ ದಾಳಿ ವಿಚಾರ ನನಗೆ ಗೊತ್ತಿಲ್ಲ ಎಂದು ಹೇಳಿ ಹೊರಟು ಹೋದರು. ಇದೇ ಸಂದರ್ಭದಲ್ಲಿ ಮನೆಯ ಮುಂದೆ ಜಮಾಯಿಸಿದ ಕ್ಷೇತ್ರದ ಜನರೊಂದಿಗೆ ಜನತಾ ದರ್ಶನ ಮಾಡಿದ ಸಿದ್ದರಾಮಯ್ಯ ಖುಷಿಯಿಂದಲೇ ಸ್ವತಹ ಎಲ್ಲರಿಂದಲೂ ಅರ್ಜಿ ಪಡೆದರು. ಈ ಸಂದರ್ಭದಲ್ಲಿ ಕ್ಷೇತ್ರದ ವ್ಯಕ್ತಿಯೊಬ್ಬ ನಿಮ್ಮನ್ನ ನೋಡಲು ಪೊಲೀಸರು ಬಿಡುತ್ತಿಲ್ಲ ಎಂದು ಏರುಧ್ವನಿಯಲ್ಲಿ ಪ್ರಶ್ನೆ ಮಾಡಿದ್ದು, ಇದಕ್ಕೆ ಸಿಎಂ ಏರುಧ್ವನಿಯಲ್ಲೇ, ಹೇ ಏನ್ ನಿನ್ನನ್ನ ಕೋಣೆಯೊಳಗೆ ಬಿಡಲು ಸಾಧ್ಯವೇ ಎಂದು ಹಳ್ಳಿ ಭಾಷೆಯಲ್ಲಿ ಉತ್ತರಿಸಿದರು. (ಆರ್.ವಿ,ಕೆ.ಎಸ್,ಎಸ್.ಎಚ್)