
ಮೈಸೂರು
ಸೋಲಾರ್ ವ್ಯವಸ್ಥೆಯ ಕುರಿತು ವಿದ್ಯಾರ್ಥಿನಿಯರು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಿ : ಇಂಧನ ಸಚಿವ ಡಿ.ಕೆ.ಶಿವಕುಮಾರ್
ಮೈಸೂರು,ಸೆ.22:- ಸೋಲಾರ್ ವ್ಯವಸ್ಥೆಯ ಕುರಿತು ವಿದ್ಯಾರ್ಥಿನಿಯರು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ಮತ್ತು ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜು, ಸಾಂಸ್ಕೃತಿಕ, ಕಲಾ, ವಿಜ್ಞಾನ, ವಾಣಿಜ್ಯ ಮತ್ತು ಕ್ರೀಡಾ ವೇದಿಕೆಗಳ ಹಾಗೂ ಸಂಸ್ಥೆಯ ಕಟ್ಟಡದ ಮೇಲಿನ 200 ಕಿ.ಲೋ. ವ್ಯಾಟ್ ಸೌರಶಕ್ತಿ ವಿದ್ಯುತ್ ಘಟಕವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿನಿಯರಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಹೊರಹೊಮ್ಮಿಸಲು ಸೂಕ್ತವಾದಂತಹ ವೇದಿಕೆಯನ್ನು ಶ್ರೀ ನಟರಾಜ ಪ್ರತಿಷ್ಠಾನವು ಕಾಲೇಜಿನ ವಿದ್ಯಾರ್ಥಿನಿಯರಿಗೆ ಸಮಾನವಾಗಿ ಒದಗಿಸುತ್ತಿದ್ದು, ಈ ನಿಟ್ಟಿನಲ್ಲಿ ಕಾಲೇಜಿನ ಸಾಂಸ್ಕೃತಿಕ, ಕಲಾ, ವಿಜ್ಞಾನ, ವಾಣಿಜ್ಯ ಹಾಗೂ ಕ್ರೀಡಾ ವೇದಿಕೆಗಳು ಬಹಳ ಸೃಜನಶೀಲವಾಗಿ ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವೆಂದರು. ಸಂಸ್ಥೆಯ ಕಟ್ಟಡದ ಮೇಲಿನ 200 ಕಿ.ಲೋ. ವ್ಯಾಟ್ ಸೌರಶಕ್ತಿ ವಿದ್ಯುತ್ ಘಟಕವನ್ನು ಸ್ಥಾಪಿಸಿರುವುದು ಹರ್ಷದಾಯಕವೆಂದ ಅವರು
“ಇದೊಂದು ಒಳ್ಳೆಯ ಸಂಭ್ರಮ ಹಾಗೂ ಪವಿತ್ರವಾದ ದಿನ. ಕರ್ನಾಟಕ ರಾಜ್ಯವು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಸೋಲಾರ್ ವ್ಯವಸ್ಥೆಯ ಬಗ್ಗೆ ವಿದ್ಯಾರ್ಥಿನಿಯರು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು. ವಿದ್ಯುತ್ ಘಟಕ ವಲಯದಲ್ಲಿ ಹೊಸ ಚರಿತ್ರೆ ಸ್ಥಾಪಿಸಲು ಎಲ್ಲಾ ಮಂತ್ರಿಗಳು ತಮಗೆ ಸಹಕಾರ ನೀಡಿದ್ದಾರೆ. ಮಹಾರಾಜರು ಮೈಸೂರು ಜಿಲ್ಲೆಯಲ್ಲಿ ಸಾಕಷ್ಟು ವಿದ್ಯಾ ಸಂಸ್ಥೆಗಳಿಗೆ ಸ್ಫೂರ್ತಿ ನೀಡಿದ್ದು ತನ್ನದೇ ಆದ ಮೇಲುಗೈ ಸಾಧಿಸಿದೆ. ಇಂದಿನ ಯುವತಿಯರೇ ಮುಂದಿನ ದೊಡ್ಡ ಆಸ್ತಿ ಎಂದು ಶ್ಲಾಘೀಸಿದರು”.
ಈ ಸಂದರ್ಭ ನಟರಾಜ ಪ್ರತಿಷ್ಠಾನದ ಚಿದಾನಂದ ಮಹಾಸ್ವಾಮೀಜಿ, ವಾರ್ನಿಷ್ ಅಂಡ್ ಪೇಂಟ್ ಅಧ್ಯಕ್ಷ ಹೆಚ್.ಎ. ವೆಂಕಟೇಶ್, ಶಾಸಕ .ಕೆ.ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು. (ಎಸ್.ಎಚ್)