Uncategorized

ಕಾಂಗ್ರೆಸ್ ಮುಖಂಡರಿಗೆ ತಕ್ಕ ಉತ್ತರ ನೀಡುವೆ: ಶ್ರೀನಿವಾಸ್ ಪ್ರಸಾದ್

ಕಾಂಗ್ರೆಸ್ ಮುಖಂಡರಿಗೆ ತಕ್ಕ ಉತ್ತರ ನೀಡುವೆ: ಶ್ರೀನಿವಾಸ್ ಪ್ರಸಾದ್

ಕಳೆದ ತಿಂಗಳು ಸಮಾವೇಶ ಮಾಡಿ ನನ್ನನ್ನು ಜರಿದ ಕಾಂಗ್ರೆಸ್ ಮುಖಂಡರಿಗೆ 8ನೇ ತಾರೀಕಿನಂದು ಉತ್ತರ ನೀಡುತ್ತೇನೆ ಎಂದು ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

ತಾಲೂಕಿನ ಅಭಿಮಾನಿಗಳು ಮತ್ತು ಕಾರ್ಯಕರ್ತರ ಜೊತೆ ನವೆಂಬರ್ 8ರಂದು ಸಮಾವೇಶ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ದ್ವೇಷದ ರಾಜಕಾರಣ ಮಾಡಿ ನನ್ನನ್ನು ಸಂಪುಟದಿಂದ ಕೈಬಿಟ್ಟಿದ್ದಾರೆ. ಅವರು ಬಾವಿಯಲ್ಲಿರುವ ಕಪ್ಪೆ. ದೆಹಲಿಯಂತ ಸಮುದ್ರದಲ್ಲಿ ನಾನು ರಾಜಕೀಯ ಮಾಡಿದ್ದೇನೆ. ಸಿದ್ದರಾಮಯ್ಯನವರನ್ನು ವರುಣ ಕ್ಷೇತ್ರಕ್ಕೆ ಕರೆತಂದೆ. ಈಗಿರುವ ಧೈರ್ಯ ಅವರಿಗೆ ಆಗ ಇರಲಿಲ್ಲ. ಚುನಾವಣೆ ಸಂದರ್ಭ ನಾನು ಅವರಿಗೆ ಧೈರ್ಯ ಹೇಳಿದ್ದೆ. ಸಿದ್ದರಾಮಯ್ಯ ಅವರೀಗ ಐದು ಬಾರಿ ಗೆದ್ದಿರಬಹುದು. ಆದರೆ, ಆರನೇ ಬಾರಿ ನನ್ನ ಮನೆಯ ಮುಂದೆ ಕೈಮುಗಿದು ನಿಂತಿದ್ದರು. ಬಸವಕಲ್ಯಾಣದಲ್ಲಿ ಅಹಿಂದ ಸಮಾವೇಶ ಮಾಡಿ ಒಬ್ಬನೆ ಬಾಯಿಬಡಿದುಕೊಳ್ಳುವ ಪರಿಸ್ಥಿತಿಯಲ್ಲಿರುವ ಸಿಎಂ ಪದವಿ ಬಿಟ್ಟರೆ ಅವರು ನನಗೆ ಯಾವುದರಲ್ಲೂ ಸಮವಿಲ್ಲ. ನನ್ನನ್ನು ಸಂಪುಟದಿಂದ ಕೈಬಿಟ್ಟಾಗ ಪರಮೇಶ್ವರ್, ಖರ್ಗೆ ಯಾರೂ ಮಾತನಾಡಲಿಲ್ಲ ಯಾಕೆ? ಇದಕ್ಕೆಲ್ಲ ಜಿಲ್ಲಾ ಮಂತ್ರಿಯೊಬ್ಬ ಮಾಸ್ಟರ್‍ಮೈಂಡ್ ಎಂದು ಮಹದೇವಪ್ಪನವರನ್ನು ಶ್ರೀನಿವಾಸ್ ಪ್ರಸಾದ್ ಪರೋಕ್ಷವಾಗಿ ಟೀಕಿಸಿದರು.

ನ.8ರಂದು ನಡೆಯುವ ಸಭೆ ಯಾವುದೇ ಪಕ್ಷ ಸಂಘಟನೆಯ ಸಭೆಯಲ್ಲ. ಇದು ನನ್ನ ಹಿತವನ್ನು ಬಯಸುವ ಅಭಿಮಾನಿಗಳ ಬೆಂಬಲಿಗರ ಸಭೆ. ನಾನು ಮಲ್ಲಿಕಾರ್ಜುನ ಖರ್ಗೆಗಿಂತ ಹಿರಿಯ ರಾಜಕಾರಣಿ. ಎಲ್ಲಾ ಕ್ಷೇತ್ರದಲ್ಲೂ ರಾಜಕೀಯ ಮಾಡಿದ್ಢೇನೆ. ನನ್ನನ್ನು ಖರ್ಗೆ ಮಗನಿಗೆ ಸಮ ಮಾಡುತ್ತಾರೆ ಸಿದ್ದರಾಮಯ್ಯ. ವ್ಯವಸ್ಥಿತವಾಗಿ ಎಲ್ಲ ದಲಿತ ನಾಯಕರನ್ನು ಮುಗಿಸಿದ್ದಾರೆ ಎಂದು ಸಿಎಂಗೆ ಏಕವಚನ ಪ್ರಯೋಗ ಮಾಡಿ ಜರಿದರು.

ಸಭೆಯಲ್ಲಿ ಅಭಿಮಾನಿಗಳು, ಮುಖಂಡ ಯು.ಎನ್.ಪದ್ಮನಾಭರಾವ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಬ್ಬಣ್ಣ, ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಹೊಸಕೋಟೆ ಎಲ್.ಮಾದಪ್ಪ, ಮಾಜಿ ಜಿಪಂ ಸದಸ್ಯೆ ಡಾ. ಶೈಲಾಬಾಲರಾಜ್, ಮಾಜಿ ಮೂಡಾ ಅಧ್ಯಕ್ಷ ಕೆ.ಆರ್.ಮೋಹನ್ ಕುಮಾರ್, ದೇವಪುತ್ರ, ಸುರೇಶ್, ಮಹದೇವು, ಸ.ವಕೀಲ ನಂಜುಂಡಸ್ವಾಮಿ, ಹಾಗೂ ನೂರಾರು ಅಭಿಮಾನಿಗಳು ಹಾಜರಿದ್ದರು.

Leave a Reply

comments

Related Articles

error: