ಮೈಸೂರು

ಕೃಷಿಯಲ್ಲಿ ಉತ್ತಮ ಲಾಭ ಗಳಿಸುವುದು ಹೇಗೆ? ರೈತ ದಸರಾದಲ್ಲಿದೆ ಮಾಹಿತಿ

ಮೈಸೂರು,ಸೆ.22-ದೇಶದ ಬೆನ್ನೆಲುಬು ರೈತ. ಅನ್ನದಾತನಾಗಿರುವ ರೈತ ಸಾಲಬಾಧೆ, ಬೆಳೆನಷ್ಟ ಎಂದು ಬೇಸತ್ತು ಒಂದೆಡೆ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದರೆ, ಮತ್ತೊಂದೆಡೆ ರೈತ ಕೃಷಿಯಿಂದ ದೂರ ಉಳಿಯುತ್ತಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳದೆ, ಕೃಷಿಯಿಂದ ದೂರ ಉಳಿಯದೆ, ಆಧುನಿಕ ರೀತಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಉತ್ತಮ ಲಾಭಗಳಿಸುವುದು ಹೇಗೆ? ಎಂಬುದರ ಸಂಪೂರ್ಣ ಮಾಹಿತಿ ಒಂದೇ ಸೂರಿನಡಿ ಸಿಗಲಿದೆ. ದಸರಾ ಮಹೋತ್ಸವದ ಅಂಗವಾಗಿ ನಗರದ ಜೆ.ಕೆ.ಮೈದಾನದಲ್ಲಿ ಆಯೋಜಿಸಿರುವ ರೈತ ದಸರಾ ವಸ್ತುಪ್ರದರ್ಶನ ಮತ್ತು ಮಾರಾಟ ಮಳಿಗೆಗಳಲ್ಲಿ ಈ ಮಾಹಿತಿ ಸಿಗಲಿದೆ.

ಈ ಬಾರಿಯ ರೈತ ದಸರಾವನ್ನು ವಿಶೇಷವಾಗಿ ಮಣ್ಣು, ನೀರಿನ ಸಮಸ್ಯೆ, ಸಿರಿಧಾನ್ಯ, ಸಾವಯವ ಕೃಷಿಗೆ ಹೆಚ್ಚು ಮಹತ್ವ ‌ನೀಡಿ ಆಯೋಜಿಸಲಾಗಿದೆ. ಸಿರಿಧ್ಯಾನ, ಮುಸುಕಿನ ಜೋಳದ ತಳಿಗಳು, ಮುಸುಕಿನ ಜೋಳದಿಂದ ತಯಾರಿಸಬಹುದಾದ ತಿಂಡಿಗಳು, ಹುಲ್ಲಿನ ತಳಿಗಳು, ಮೀನಿನ ತಳಿಗಳು, ಅದರ ವೈಶಿಷ್ಟಗಳು, ರೇಷ್ಮೆ ಹುಳುಗಳ ಮಾಹಿತಿ, ಕೃಷಿ ಚಟುವಟಿಕೆಗಾಗಿ ಬಳಸಲಾಗುವ ಯಂತ್ರೋಪಕರಣಗಳು ಹೀಗೆ ಹತ್ತು ಹಲವು ಮಾಹಿತಿಗಳನ್ನು ರೈತರು ರೈತ ದಸರಾಕ್ಕೆ ಭೇಟಿ ನೀಡಿ ತಿಳಿದುಕೊಳ್ಳಬಹುದು. ದಷ್ಟ-ಪುಷ್ಟವಾಗಿರುವ ಬಂಡೂರು ಕುರಿ, ಶಿರೋಹಿ, ಬಿಟಲ್, ಜಮುನಾ ಪ್ಯಾರಿ ಮೇಕೆಗಳು ಎಲ್ಲರ ಗಮನ ಸೆಳೆಯುತ್ತಿದ್ದು, ಪಶುಸಂಗೋಪನೆಯಡಿಯಲ್ಲಿ ಈ ತಳಿಗಳ ಕುರಿ, ಮೇಕೆಯನ್ನು ಸಾಕಿ ಉತ್ತಮ ಲಾಭಗಳಿಸುವುದು ಹೇಗೆ ಎಂಬುದನ್ನು ಕುರಿ, ಮೇಕೆ ಸಾಕುತ್ತಿರುವ ರೈತರೆ ಸ್ವತಃ ಮಾಹಿತಿ ನೀಡುತ್ತಾರೆ.

ಬನ್ನೂರು ಕುರಿಯಲ್ಲ, ಬಂಡೂರು ಕುರಿ: ಬಂಡೂರು ಕುರಿಗಳನ್ನು ಸಾಕುತ್ತಿರುವ ಮಳವಳ್ಳಿ ತಾಲೂಕಿನ ಬಂಡೂರು ಗ್ರಾಮದ ರೈತ ದೊಡ್ಡಯ್ಯ ಹೇಳುವ ಪ್ರಕಾರ ಇದು ಬಂಡೂರು ಕುರಿ. ಆದರೆ ಎಲ್ಲರೂ ಈ ತಳಿಯ ಕುರಿಗಳನ್ನು ಬನ್ನೂರು ಕುರಿ ಎಂದು ಕರೆಯುತ್ತಾರೆ. ಅದು ತಪ್ಪು ಗ್ರಹಿಕೆ. ಈ ಕುರಿ ಸಾಕಾಣಿಕೆಯಿಂದ ವರ್ಷಕ್ಕೆ 2 ಲಕ್ಷದಷ್ಟು ಆದಾಯಗಳಿಸಬಹುದು. 10 ಸಾವಿರದಿಂದ 25 ಸಾವಿರ ರೂ.ನವರೆಗೆ ಈ ಕುರಿ ಮಾರಾಟವಾಗುತ್ತದೆ. ಈ ಕುರಿಗೆ ಹುರುಳಿ, ಜೋಳ ಹೀಗೆ ತರಾವರಿ ಸೊಪ್ಪುಗಳನ್ನು ಹಾಕುತ್ತೇನೆ. ಕುರಿ ಸಾಕಾಣಿಕೆ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಆದರೆ ಕುರಿ ಸಾಕಾಣಿಕೆ ಜಾಸ್ತಿಯಾಗಿದೆ. ರೈತ ಇದರಿಂದ ಉತ್ತಮ ಲಾಭ ಗಳಿಸಬಹುದು ಎನ್ನುತ್ತಾರೆ.

ಶಿರೋಹಿ, ಬಿಟಲ್, ಜಮುನಾ ಪ್ಯಾರಿ ಇವು ರಾಜಸ್ಥಾನ, ಯುಪಿ ತಳಿಗಳು. ಇವಕ್ಕೆ ಸರಿಯಾಗಿ ಮೇವು ಹಾಕಿದರೆ ದಷ್ಟ-ಪುಷ್ಟವಾಗಿ ಬೆಳೆಯುತ್ತವೆ. ಶಿರೋಹಿ ತಳಿಯ ಮೇಕೆ 79 ಕೆಜಿ ಇದೆ. ಇದನ್ನು 120 ಕೆಜಿ ವರೆಗೆ ಬೆಳೆಸಿ ಪ್ರಶಸ್ತಿ ತೆಗೆದುಕೊಂಡಿದ್ದು ಇದೆ. ಈ ತಳಿಗಳ ಮೇಕೆ ಸಾಕಾಣಿಕೆಗಾಗಿಯೇ ಮೆಲ್ಲಹಳ್ಳಿಯಲ್ಲಿ 7 ವರ್ಷದಿಂದ ಫಾರಂ ಕೂಡ ಮಾಡಿಕೊಂಡಿದ್ದು, ರಾಜ್ಯ ಮಾತ್ರವಲ್ಲದೆ, ಬೇರೆ ರಾಜ್ಯಗಳಿಂದಲೂ ಮೇಕೆಯನ್ನು ಕೊಂಡುಕೊಳ್ಳುತ್ತಾರೆ. ಇದಕ್ಕೆ ಮೆಕ್ಕೆ ಜೋಳದ ಕಡ್ಡಿ, ಸಿಒ5 ಮೇವು ತಳಿ ಹೀಗೆ ಅನೇಕ ಆಹಾರಗಳನ್ನು ಕೊಡುತ್ತೇನೆ. ಗಂಡು ಮೇಕೆ ವರ್ಷಕ್ಕೆ 40 ಕೆ.ಜಿ ಜಾಸ್ತಿಯಾದರೆ, ಹೆಣ್ಣು ಮೇಕೆ ವರ್ಷಕ್ಕೆ 28 ಕೆಜಿ ಹೆಚ್ಚಾಗುತ್ತದೆ. ಇವು 12 ಸಾವಿರದಿಂದ 25 ಸಾವಿರ ರೂ. ನವರೆಗೆ, ಮರಿಗಳಾದರೆ 12 ರಿಂದ 14 ಸಾವಿರ ರೂ. ನವರೆಗೆ ಮಾರಾಟವಾಗುತ್ತವೆ ಎಂದು ಮೈಸೂರು ಜಿಲ್ಲೆ ಹಾರೋಹಳ್ಳಿ ತಾಲೂಕಿನ ಮೆಲ್ಲಹಳ್ಳಿ ಗ್ರಾಮದ ದಿಲೀಪ್ ಕುಮಾರ್ ಅಭಿಪ್ರಾಯ ಹಂಚಿಕೊಂಡರು.

ನಿತ್ಯಶ್ರೀ, ಹೇಮ, ಎಂಎಎಚ್ 14-5 ಜೋಳದ ತಳಿಗಳು, ಗಿನಿ ಹುಲ್ಲು, ಅಂಜನ್ ಹುಲ್ಲು, ರೋಡ್ಸ್ ಹುಲ್ಲು, ಮಸುಕಿನ ಜೋಳದಿಂದ ತಯಾರಿಸಬಹುದಾದ ತಿಂಡಿಗಳಾದ ಜೋಳದ ಪಾಸ್ತ, ಬೇಬಿ ಕಾರ್ನ್ ಕ್ಯಾಂಡಿ, ಖಾರ, ನಿಪ್ಪಟ್ಟು, ಲಡ್ಡು, ರಾಸಾಯನಿಕ ಮುಕ್ತ ಬೆಲ್ಲ, ಮೀನು ಸಾಕಾಣಿಕೆಯಲ್ಲಿ ಕಾಟ್ಲ, ರೋಹು, ಮೃಗಾಲ್, ಸಾಮಾನ್ಯ ಗೆಂಡೆ, ಬೆಳ್ಳಿ ಗೆಂಡೆ, ಹುಲ್ಲು ಗೆಂಡೆ ತಳಿಯ ಮಾಹಿತಿ ರೈತರಿಗೆ ಉಪಯೋಗವಾಗಲಿದೆ.

ರೈತ ದಸರಾ ವಸ್ತುಪ್ರದರ್ಶನದಲ್ಲಿ 30 ಕ್ಕೂ ಹೆಚ್ಚು ಮಳಿಗೆಗಳಿವೆ. ಇನ್ನೂ 3 ದಿನ ಪ್ರದರ್ಶನ ಇರಲಿದ್ದು, ರೈತರು ಈ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ.  ರೈತ ದಸರಾ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟನಾ ಕಾರ್ಯಕ್ರಮಕ್ಕೆ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ಗೈರು ಹಾಜರಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಜಿಕೆವಿಕೆ ಕೃಷಿ ವಿವಿಯ ಉಪಕುಲಪತಿ ಡಾ.ಎಂ.ಶಿವಣ್ಣ ಚಾಲನೆ ನೀಡಿದರು. (ವರದಿ-ಎಂ.ಎನ್)

Leave a Reply

comments

Related Articles

error: