
ಕರ್ನಾಟಕ
ವೃದ್ಧ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ
ರಾಜ್ಯ(ಮಂಡ್ಯ)ಸೆ.22:- ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ಬೊಮ್ಮಲಾಪುರ ಗ್ರಾಮದಲ್ಲಿ ಕ್ಷುಲ್ಲಕ ವಿಚಾರಕ್ಕಾಗಿ ದಲಿತ ವೃದ್ಧ ಮಹಿಳೆಯ ಮೇಲೆ ಸವರ್ಣೀಯ ವ್ಯಕ್ತಿಯೊಬ್ಬ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಬೊಮ್ಮಲಾಪುರ ಗ್ರಾಮದ ಕರಿಯಯ್ಯ ಅವರ ಪತ್ನಿ ದೇವಮ್ಮ(60) ಗಾಯಗೊಂಡ ವೃದ್ದೆಯಾಗಿದ್ದಾರೆ. ಅದೇ ಗ್ರಾಮದ ಪಾಪಣ್ಣ ಅವರ ಮಗ ಮುದ್ದಪ್ಪ ಹಲ್ಲೆ ನಡೆಸಿದ್ದು, ಬಿ.ಎಸ್.ಸಿದ್ದಪ್ಪ ಮತ್ತು ಮುದ್ದಪ್ಪ ಅವರು ರಸ್ತೆ ವಿಚಾರವಾಗಿ ಪರಸ್ಪರ ಜಗಳವಾಡುತ್ತಿದ್ದರು. ಈ ಸಂದರ್ಭದಲ್ಲಿ ಜಗಳ ನಡೆಯುತ್ತಿದ್ದ ಸ್ಥಳದಲ್ಲಿ ಕಟ್ಟಿದ್ದ ತಮ್ಮ ಜಾನುವಾರುಗಳನ್ನು ಬಿಚ್ಚಿಕೊಂಡು ಬರಲು ಹೋದಾಗ ಜಗಳ ಬಿಡಿಸಲು ಬಂದಿದ್ದಾರೆ ಎಂದು ತಪ್ಪಾಗಿ ಗ್ರಹಿಸಿದ ಮುದ್ದಪ್ಪ ಎಂಬಾತ ದೇವಮ್ಮ ಅವರನ್ನು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ, ಕಲ್ಲಿನಿಂದ ತಲೆಯ ಭಾಗಕ್ಕೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ. ಗಾಯಗೊಂಡ ದೇವಮ್ಮ ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.(ಕೆ.ಎಸ್,ಎಸ್.ಎಚ್)