ಮೈಸೂರು

ಅಮಾನತು ಆದೇಶ ಹಿಂಪಡೆಯುವಂತೆ ಆಗ್ರಹ: ಯುವರಾಜ ಕಾಲೇಜು ಅತಿಥಿ ಉಪನ್ಯಾಸಕರ ಪ್ರತಿಭಟನೆ

ಏಕಾಏಕಿ ಕಾನೂನು ಬಾಹಿರವಾಗಿ ಕರ್ತವ್ಯದಿಂದ ವಜಾಗೊಳಿಸಿರುವ ಪ್ರಾಂಶುಪಾಲರ ನಡೆಯನ್ನು ಖಂಡಿಸಿ ಹಾಗೂ ಕೂಡಲೇ ಅಮಾನತು ಆದೇಶವನ್ನು ಹಿಂಪಡೆಯುವಂತೆ ಆಗ್ರಹಿಸಿ ಯುವರಾಜ ಕಾಲೇಜು ಅತಿಥಿ ಉಪನ್ಯಾಸಕರು ಬುಧವಾರ ನಗರದಲ್ಲಿ ಪ್ರತಿಭಟಿಸಿದರು.

ಯುವರಾಜ ಕಾಲೇಜು ಮುಂಭಾಗದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದ ಅತಿಥಿ ಉಪನ್ಯಾಸಕರು ಬಳಿಕ ಕ್ರಾಫರ್ಡ್ ಹಾಲ್ ಮುಂಭಾಗ ಪ್ರತಿಭಟಿಸಿ, ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ಹೊರಟು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಈ ವೇಳೆ  ಪ್ರಾಂಶುಪಾಲರ ಆದೇಶದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಕೂಡಲೇ ವಜಾ ಆದೇಶವನ್ನು ಹಿಂಪಡೆಯುಂತೆ ಒತ್ತಾಯಿಸಿದರು.

18 ವರ್ಷಗಳಿಂದ 160ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದೇವೆ. ಆದರೆ, ಯುವರಾಜ ಕಾಲೇಜಿನ ಪ್ರಾಂಶುಪಾಲ ಪ್ರೊ.ನಂಜೇಗೌಡ ಅವರು 2016ರ ಸೆಪ್ಟೆಂಬರ್‌ನಲ್ಲಿ 64 ಮಂದಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡಿರುವುದು ಕಾನೂನು ಬಾಹಿರವಾಗಿದ್ದು ನೇಮಕವನ್ನು ರದ್ದು ಗೊಳಿಸುವಂತೆ ಸೂಚಿಸಿತ್ತು. ಅಂತೆಯೇ ವಿವಿಯ ಕುಲ ಸಚಿವರು  ಅಕ್ಟೋಬರ್ 24 ರಂದು ನೇಮಕಾತಿಯನ್ನು ರದ್ದುಗೊಳಿಸಿ, ಸರ್ಕಾರಕ್ಕೆ ವರದಿ ಕೂಡ ನೀಡಿದ್ದಾರೆ. ಸದ್ಯಕ್ಕೆ ಈ ವಿಚಾರ ಬೆಂಗಳೂರಿನ ಉಚ್ಚ ನ್ಯಾಯಾಲಯದಲ್ಲಿದೆ. ಆದರೆ, ಈ ನಡುವೆ ಅಕ್ಟೋಬರ್ 28 ರಂದು ಪ್ರಾಂಶುಪಾಲ ಪ್ರೊ. ಎಚ್. ನಂಜೇಗೌಡರು ತಮ್ಮ ನಿವೃತ್ತಿಯ ಕೊನೆಯಲ್ಲಿ ಇನ್ನಿತರ 160 ಮಂದಿ ಅತಿಥಿ ಉಪನ್ಯಾಸಕರನ್ನು ಕಾನೂನು ಬಾಹಿರವಾಗಿ ಕರ್ತವ್ಯದಿಂದ ಬಿಡುಗಡೆಗೊಳಿಸಿರುವುದು ಖಂಡನೀಯವೆಂದು ಆರೋಪಿಸಿದರು.

ಅಕ್ರಮವಾಗಿ ಪ್ರಾಂಶುಪಾಲರು ಮಾಡಿರುವ ವಜಾ ಆದೇಶವನ್ನು ಹಿಂಪಡೆದು, ಎಂದಿನಂತೆ ನಮ್ಮನ್ನು ಕರ್ತವ್ಯದಲ್ಲಿ ಮುಂದುವರಿಸುವಂತೆ ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರು ಆಗ್ರಹಿಸಿದರು. ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಮೈಸೂರು ವಿವಿ ಕುಲಪತಿಗಳ ಮೂಲಕ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿಯವರಿಗೆ ಮನವಿ ಸಲ್ಲಿಸಿದರು.

ಅತಿಥಿ ಉಪನ್ಯಾಸಕರಾದ ರಾಮಲಿಂಗೇ ಗೌಡ,  ಎಚ್.ಆರ್.ಅಭಿಲಾಶ್,  ಎಂ.ಎಂ. ಕಲ್ಪಶ್ರೀ, ಡಾ.ಜಿ.ಎನ್. ಪೂರ್ಣಿಮಾ, ಆರ್.ಶಶಿ, ಎಚ್.ಎ.ಕಾವ್ಯ ಶ್ರೀ, ದಿವ್ಯ ಶ್ರೀ, ಗೀತಾ ಶ್ರೀ.ಕೆ, ಬಿ.ಎಸ್. ಸುಜೀತ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

Leave a Reply

comments

Related Articles

error: