ಕರ್ನಾಟಕ

ಮನುಕುಲದ ಅಂಧಕಾರವನ್ನು ತೊಲಗಿಸಲು ಶಿಕ್ಷಣ ಪ್ರಬಲ ಸಾಧನ : ಶಾಸಕ ಕೆ.ಎನ್.ರಾಜಣ್ಣ

ರಾಜ್ಯ(ತುಮಕೂರು)ಸೆ.22:- ಸನಾತನ ಕಾಲದಿಂದಲೂ ಶಿಕ್ಷಕನಿಗೆ ಗೌರವನೀಯ ಸ್ಥಾನವನ್ನು ನೀಡಲಾಗಿದೆ. ಗುರುವಿನ ಕರುಣೆಯಿಂದ ಮನುಷ್ಯ ಸುಂದರ ಶಿಲ್ಪವಾಗಿ, ಸಮಾಜಕ್ಕೆ ಉಪಯೋಗಕಾರಿಯಾಗಿದ್ದಾನೆ. ಮನುಕುಲದ ಅಂಧಕಾರವನ್ನು ತೊಲಗಿಸಲು ಶಿಕ್ಷಣ ಪ್ರಬಲ ಸಾಧನವಾಗಿದೆ ಎಂದು ಶಾಸಕ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಮಧುಗಿರಿ ಮಾಹಿತಿ ವೇದಿಕೆ ವತಿಯಿಂದ ಏರ್ಪಡಿಸಿದ್ದ ಗುರುವಿಗೆ ನಮನ ಕೃತಿ ಲೋಕಾರ್ಪಣೆ, ಕವಿಗೋಷ್ಠಿ ಮತ್ತು ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶಿಕ್ಷಕರಲ್ಲಿನ ಅಗಾಧ ಶಕ್ತಿಯ ಪ್ರಭೆಯಿಂದ, ಭವಿಷ್ಯದ ಸತ್ಪ್ರಜೆಗಳನ್ನು ರೂಪಿಸುವ ಶಕ್ತಿಯಿದೆ. ಗುರುಗಳ ಮಾರ್ಗದರ್ಶನದಲ್ಲಿ ನಡೆದ ಪ್ರತಿಯೊಬ್ಬರೂ ವಿಶಿಷ್ಟ ಸಾಧನೆ ಮಾಡಿದ್ದಾರೆ. ತಾಯಿ ಮತ್ತು ಗುರುಗಳ ಋಣವನ್ನು ಎಷ್ಟು ಜನ್ಮವೆತ್ತಿದರೂ ತೀರಿಸಲು ಸಾಧ್ಯವಿಲ್ಲ. ವಿದ್ಯೆಯನ್ನು ಅರಸಿ ಬರುವ ವಿದ್ಯಾರ್ಥಿ ವಿನಯದಿಂದ, ಶ್ರದ್ದಾ ಭಕ್ತಿಯಿಂದ ಕಲಿತು, ಗುರುಗಳಿಗೆ ಗೌರವವನ್ನು ಸಲ್ಲಿಸಬೇಕು. ದೈವದತ್ತ ಕೊಡುಗೆಯಾದ ಗುರುವಿನ ಸಾಂಗತ್ಯದಿಂದ ಜೀವನ ಪಾವನಗೊಳಿಸಿಕೊಳ್ಳಬೇಕು. ಶಿಕ್ಷಕರು ಅಯಸ್ಕಾಂತವಿದ್ದಂತೆ, ಮಕ್ಕಳೆಂಬ ಕಬ್ಬಿಣದ ತುಂಡುಗಳನ್ನು ಆಕರ್ಷಿಸಬಲ್ಲ ಗುರುತ್ವಾಕರ್ಷಣೆ ಹೊಂದಿರುವ ಶಕ್ತಿ. ವಿದ್ಯಾರ್ಥಿಗಳಿಗೆ ಅಯಸ್ಕಾಂತೀಯ ಗುಣವನ್ನು ವರ್ಗಾಯಿಸಬಲ್ಲ ಶಕ್ತಿಯಿದೆ. ಪ್ರಸ್ತುತ ಶಿಕ್ಷಕರಲ್ಲಿ ಕಲಿಯುವ ಆಸಕ್ತಿ ಹೆಚ್ಚುವ ಅನಿವಾರ್ಯತೆ ಇದೆ. ಶಿಕ್ಷಕ ನಿಷ್ಕ್ರಿಯನಾದರೆ ವ್ಯಕ್ತಿ, ಕುಟುಂಬ, ಸಮಾಜ ಹಾಗೂ ರಾಷ್ಟ್ರದ ಬೆನ್ನೆಲುಬು ದುರ್ಬಲವಾಗುತ್ತದೆ. ಆದುದರಿಂದ ಶಿಕ್ಷಕ ಸದಾ ಕ್ರಿಯಾಶೀಲವಾಗಿರಬೇಕು. ಕ್ರಿಯಾಶೀಲ ಶಿಕ್ಷಕರ ಕುರಿತು ಮಧುಗಿರಿ ಮಾಹಿತಿ ವೇದಿಕೆ ಕೃತಿಗಾಗಿ ಕವನ ಮತ್ತು ಲೇಖನಗಳನ್ನು ಸಂಗ್ರಹಿಸಿ ಪ್ರಕಟಿಸಿರುವುದು ಅಭಿನಂದನೀಯ ಎಂದರು.

ಕವಯತ್ರಿ ವಿಜಯಾಮೋಹನ್, ಜನಪದ ಕಲಾವಿದ ನರಸೇಗೌಡ, ಪ್ರಕಾಶಕರಾದ ಗುರುಮೂರ್ತಿ, ವಿಶ್ವದಾಖಲೆ ಖ್ಯಾತಿಯ ಕ್ಯಾಲೆಂಡರ್ ಶಿವಕುಮಾರ್, ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಪ್ರಾಂಶುಪಾಲರಾದ ಮುನೀಂದ್ರ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: