ಕರ್ನಾಟಕ

ಜ್ಞಾನಾರ್ಜನೆಗೆ ಉತ್ತಮ ವಾತಾವರಣ ನಿರ್ಮಿಸುವ ಕೆಲಸವೇ ವಿದ್ಯಾರ್ಥಿನಿಲಯಗಳ ಸ್ಥಾಪನೆ : ಕೆ.ಎನ್. ರಾಜಣ್ಣ

ರಾಜ್ಯ(ತುಮಕೂರು)ಸೆ.22:- ಈ ಹಿಂದೆ ಹೆಣ್ಣು ಮಕ್ಕಳಿಗೆ ಎಸ್ಎಸ್ಎಲ್‌ಸಿ ವ್ಯಾಸಂಗ ಮಾಡಿಸುವುದೇ ಪೋಷಕರಿಗೆ ದೊಡ್ಡ ಕೆಲಸವಾಗಿತ್ತು. ಆದರೆ, ಕಾಲ ಬದಲಾದಂತೆ ವಿದ್ಯಾರ್ಜನೆಯ ಹಂತ ಹೆಚ್ಚಾಗಿದ್ದು, ಮಧುಗಿರಿಯಲ್ಲಿ ವಿದ್ಯಾರ್ಥಿನಿಯರ ನಿಲಯ ಕಟ್ಟಿಸಿರುವುದು ಅಭಿನಂದನಾರ್ಹ ಕೆಲಸ ಎಂದು ಶಾಸಕ ಕೆ.ಎನ್. ರಾಜಣ್ಣ ಹೇಳಿದರು.

ಪಟ್ಟಣದ ಮಹಾತ್ಮಗಾಂಧಿ ಬಡಾವಣೆಯಲ್ಲಿ ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘ ನೂತನವಾಗಿ ನಿರ್ಮಿಸಿರುವ ವಿದ್ಯಾರ್ಥಿನಿ ನಿಲಯದ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದ ನಂತರ ಎಂ.ಎನ್.ಕೆ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಎಲ್ಲಾ ರಂಗಗಳಲ್ಲೂ ಹೆಣ್ಣು ಮಕ್ಕಳೇ ಮುನ್ನಡೆ ಸಾಧಿಸುತ್ತಿದ್ದಾರೆ. ಯಾವುದೇ ಸಮುದಾಯದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳಲ್ಲೂ ಹೆಣ್ಣು ಮಕ್ಕಳೇ ಹೆಚ್ಚಾಗಿರುತ್ತಾರೆ. ಅವರ ಬುದ್ದಿವಂತಿಕೆಗೆ ತಕ್ಕಂತೆ ಅವಕಾಶಗಳನ್ನು ಬಳಸಿಕೊಂಡು ಓದುತ್ತಿದ್ದಾರೆ. ಸಾರ್ವಜನಿಕರು ಮತ್ತು ಸಮುದಾಯದವರು ಅವರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡುವುದರ ಮೂಲಕ ಜ್ಞಾನಾರ್ಜನೆಗೆ ಉತ್ತಮ ವಾತಾವರಣ ನಿರ್ಮಿಸುವ ಕೆಲಸವೇ ವಿದ್ಯಾರ್ಥಿನಿಲಯಗಳ ಸ್ಥಾಪನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಂಘದ ಅಧ್ಯಕ್ಷ ಡಿ.ಈ. ರವಿಕುಮಾರ್ ಮಾತನಾಡಿ, ಬೆಂಗಳೂರಿನಲ್ಲಿ ವಿದ್ಯಾರ್ಥಿನಿಲಯ ಸ್ಥಾಪನೆಗೆ ಸುಮಾರು 1 ಎಕರೆಗೂ ಹೆಚ್ಚು ಜಾಗ ಸರ್ಕಾರದಿಂದ ಮಂಜೂರಾತಿ ಹಂತದಲ್ಲಿದೆ. ರಾಜ್ಯಾದ್ಯಂತ ಸುಮಾರು 4 ರಿಂದ 50 ಕೋಟಿ ರೂ.ಗಳಷ್ಟು ಮೌಲ್ಯದ ಆಸ್ತಿ ಹೊಂದಿದ್ದು, ಅವಶ್ಯಕತೆ ಇರುವ ಕಡೆ ಸಮುದಾಯ ಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುತ್ತಿದೆ. ಸೆ.24 ರಂದು ಸಿರಾ ತಾಲೂಕಿನ ಕಡವೀಗೆರೆ ಗೇಟ್ ಬಳಿ ನಿರ್ಮಿಸಿರುವ ನೂತನ ಸುಮುದಾಯ ಭವನ ಲೋಕಾರ್ಪಣೆಗೊಳ್ಳಲಿದೆ ಎಂದರು. ಕೇಂದ್ರ ಸಂಘದ ಉಪಾಧ್ಯಕ್ಷರುಗಳಾದ ಪದ್ಮಾ ಮುಖ್ಯಮಂತ್ರಿ ಚಂದ್ರು, ಬಿ.ಎನ್. ಲಕ್ಷ್ಮೀಪತಿ, ತುಮಕೂರು ನಗರ ಪಾಲಿಕೆಯ ವಿಪಕ್ಷ ನಾಯಕ ರವಿ, ಕೇಂದ್ರ ಸಂಘದ ಸದಸ್ಯ ಎಂ.ಕೆ. ನಂಜುಂಡಯ್ಯ, ತಾಲೂಕು ಸಂಘದ ಉಪಾಧ್ಯಕ್ಷ ಎಂ.ಜಿ. ಶ್ರೀನಿವಾಸಮೂರ್ತಿ  ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: