ಮೈಸೂರು

ನ್ಯಾಪ್ಟಲ್ ಸಂಸ್ಥೆಯಿಂದ ವಂಚನೆ: ಗ್ರಾಹಕರಿಂದ ಪೊಲೀಸರಿಗೆ ದೂರು

ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾದ ಜಾಹೀರಾತನ್ನು ನಂಬಿ ಟ್ಯಾಬ್ ಖರೀದಿಸಲು ಆರ್ಡರ್ ಮಾಡಿದ್ದ ಮೈಸೂರಿನ ಅಶೋಕಪುರಂ ನಿವಾಸಿಯೊಬ್ಬರಿಗೆ ಕಂಪನಿ ವಂಚಿಸಿರುವ ಬಗ್ಗೆ ಅಶೋಕಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಶೋಕಪುರಂನ ಎನ್.ಭಾಸ್ಕರ್ ವಂಚನೆಗೆ ಒಳಗಾದವರಾಗಿದ್ದು, ತಾವು ಟಿವಿ ಮಾಧ‍್ಯಮದಲ್ಲಿ ಪ್ರಸಾರವಾದ ಜಾಹೀರಾತನ್ನು ನಂಬಿ ಟ್ಯಾಬ್ ಖರೀದಿಸಲು ಸೆ.10 ರಂದು ಆರ್ಡರ್ ಮಾಡಿದ್ದು, ಸೆ.27 ರಂದು ಅರ್ಮೆಕ್ಸ್ ಕೊರಿಯರ್ ಸಂಸ್ಥೆ ಮೂಲಕ ಬಂದ ಟ್ಯಾಬ್ ಅನ್ನು ತಾವು 4398 ರೂ. ನೀಡಿ ಖರೀದಿಸಿದ್ದಾಗಿ ಭಾಸ್ಕರ್ ದೂರಿನಲ್ಲಿ ತಿಳಿಸಿದ್ದಾರೆ.

ಕೊರಿಯರ್ ಮೂಲಕ ಬಂದ ಟ್ಯಾಬ್ ಆನ್ ಆಗಲೇ ಇಲ್ಲ. ತಮಗೆ ಟ್ಯಾಬ್ ಸರಬರಾಜು ಮಾಡಿದ ಕಂಪನಿಗೆ ಕರೆ ಮಾಡಿ ಕೇಳಿದಾಗ, ಮೊದಲ 3 ಗಂಟೆಗಳ ಕಾಲ ಟ್ಯಾಬ್ ನ್ನು ಚಾರ್ಜ್ ಮಾಡಿ ಎಂದು ಹೇಳಿದರು. ಆದರೆ ಟ್ಯಾಬ್ ಮಾತ್ರ ಚಾರ್ಜ್ ಆಗಲೇ ಇಲ್ಲ. ಮತ್ತೆ ಆ ಸಂಸ್ಥೆಯನ್ನು ಸಂಪರ್ಕಿಸಿದಾಗ ಮೈಸೂರಿನ ನಾರಾಯಣ ರಸ್ತೆಯಲ್ಲಿರುವ ಆರ್.ಸಿ ಸರ್ವಿಸ್ ಪಾಯಿಂಟ್ ಅನ್ನು ಸಂಪರ್ಕಿಸುವಂತೆ ತಿಳಿಸಿದರು.

ಅ.29ರಂದು ಸರ್ವಿಸ್ ಪಾಯಿಂಟ್ ಗೆ ತೆರಳಿ ತೋರಿಸಿದಾಗ ಅದು ಡೆಡ್ ಆಗಿದೆ ಎಂದರು. ಅದರ ಬಗ್ಗೆ ರಿಪೋರ್ಟ್ ನೀಡುವಂತೆ ಕೇಳಿದಾಗ ಟ್ಯಾಬ್ ಅನ್ನು ತಮಗೆ ವಾಪಸ್ ಕೊಟ್ಟರೆ ಮಾತ್ರ ರಿಪೋರ್ಟ್ ಕೊಡುವುದಾಗಿ ಅವರು ಹೇಳಿದರು ಎಂದು ದೂರಿನಲ್ಲಿ ವಿವರಿಸಿರುವ ಭಾಸ್ಕರ್, ತಮಗೆ ನ್ಯಾಪ್ಟಲ್ ಸಂಸ್ಥೆಯ ವಿರುದ್ಧ ಅನುಮಾನ ಬಂದಿದ್ದು, ಈ ಸಂಸ್ಥೆಯು ಗ್ರಾಹಕರಿಗೆ ಮೋಸ ಮಾಡುತ್ತಿದ್ದು. ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಅವರು ದೂರಿನಲ್ಲಿ ಕೋರಿದ್ದಾರೆ.

Leave a Reply

comments

Related Articles

error: