
ಪ್ರಮುಖ ಸುದ್ದಿ
ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ
ಪ್ರಮುಖ ಸುದ್ದಿ, ಪಿರಿಯಾಪಟ್ಟಣ, ಸೆ.೨೨: ಕಾಣೆಯಾಗಿದ್ದ ಯುವಕ ಕರಡಿಲಕ್ಕನ ಕೆರೆ ಏತ ನೀರಾವರಿಯ ಬಳಿ ಶವವಾಗಿ ಪತ್ತೆಯಾಗಿರುವ ಘಟನೆ ಶುಕ್ರವಾರ ನಡೆದಿದೆ.
ತಾಲೂಕಿನ ಚನ್ನಕೇಶವಪುರ ಬಳಿಯಿರುವ ಬೋವಿ ಕಾಲೋನಿ ಬಳಿ ಕರಡಿಲಕ್ಕನ ಕೆರೆಯಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹೊಸಗುತ್ತಿ ಗ್ರಾಮದ ಮುತ್ತಪ್ಪ ಎಂಬುವರ ಮಗ ಕೆ.ಎಂ.ಚೇತನ್ (೨೩) ಎಂಬುವನೇ ಶವವಾಗಿ ಪತ್ತೆಯಾಗಿರುವ ಯುವಕನಾಗಿದ್ದಾನೆ. ಕಳೆದ ೧೨ ದಿನಗಳ ಹಿಂದೆ ನಾಪತ್ತೆಯಾಗಿದ್ದ ಚೇತನ್ ಬಗ್ಗೆ ಸೆ.೧೨ ರಂದು ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅನುಮಾನಾಸ್ಪದವಾಗಿ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎಂಬ ಮಾಹಿತಿ ಮೇರೆಗೆ ಪೊಲೀಸರು ಯುವತಿಯನ್ನು ವಿಚಾರಣೆ ಮಾಡಿದಾಗ ಆಕೆಯ ಮನೆಯಲ್ಲಿ ಮೃತನ ಸ್ಕೂಟರ್ ಮತ್ತು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ಗುರುವಾರದಂದು ರೈತರು ತಮ್ಮ ಜಮೀನಿನ ಬಳಿ ತೆರಳುತ್ತಿದ್ದಾಗ ಹಾರಂಗಿ ನಾಲೆಯಲ್ಲಿ ಮೃತ ದೇಹವು ತೇಲಿಬರುತ್ತಿರುವುದನ್ನು ಕಂಡು ಬೆಟ್ಟದಪುರ ಪೊಲೀಸರಿಗೆ ವಿಷಯ ತಿಳಿಸಿದಾಗ ಮೃತ ದೇಹವನ್ನು ನಾಲೆಯಿಂದ ಹೊರತೆಗೆದು ಪರಿಶೀಲಿಸಿದಾಗ ಚೇತನ್ ದೇಹ ಎಂದು ದೃಢಪಟ್ಟಿದ್ದು ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ಸಂಬಂಧ ಕುಶಾಲನಗರ ಪೊಲೀಸರಿಗೆ ದೂರು ನೀಡಿದ್ದು ದೂರು ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. (ವರದಿ ಬಿ.ಎಂ)