ಮೈಸೂರು

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

ನಗರದ ವಿವಿಧ ವಾರ್ಡ್‌ಗಳಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಾಮಗಾರಿಗಳಿಗೆ ಸಚಿವ ಮಹದೇವಪ್ಪ ಶಂಕುಸ್ಥಾಪನೆ ನೆರೆವೇರಿಸಿದರು.

ನಗರದ ನಿವೇದಿತ ನಗರದ ಆಟದ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಸರೆಯಲ್ಲಿ ಕಟ್ಟಡದ ನಿರ್ಮಾಣ ಹಾಗೂ ಕೆಡವಿದ ತ್ಯಾಜ್ಯ ಸಂಸ್ಕರಣ ಘಟಕ, ವಾರ್ಡ್ ನಂಬರ್ 22ರ ನಿವೇದಿತ ನಗರದ ಆಟದ ಮೈದಾನದಲ್ಲಿ ಈಜುಕೊಳ, ನಗರದ 55 ವಾರ್ಡ್‌ಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ವಾರ್ಡ್ ನಂಬರ್ 36ರಲ್ಲಿನ ಭಾವಸಾರ್ ಈಜುಕೊಳ ಮರು ನಿರ್ಮಾಣ, ವಾರ್ಡ್ ನಂ.12ರಲ್ಲಿ ಕೈಗೆತ್ತಿಕೊಳ್ಳಲಾಗುತ್ತಿರುವ ಮೇಯರ್ ರಸ್ತೆ ಅಭಿವೃದ್ಧಿ, ವಾರ್ಡ್ ನಂ.11ರ ಸೀವೇಜ್ ಫಾರ್ಮ್ ರಸ್ತೆ ಅಭಿವೃದ್ಧಿ, ಜೆ.ಪಿ.ನಗರ ಮತ್ತು ಸರಸ್ವತಿಪುರಂನ ಈಜುಕೊಳದ ಮುಂಭಾಗ ಸುರಕ್ಷಿತ ಆಹಾರ ವಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.

ಕಾಮಗಾರಿಗಳಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಜಿಲ್ಲೆಯವರೇ ಆದ ಮುಖ್ಯಮುಂತ್ರಿ ಸಿದ್ದರಾಮಯ್ಯ  ನಗರದಲ್ಲಿ ರಸ್ತೆ ಅಭಿವೃದ್ಧಿ, ಒಳಚರಂಡಿ ಅಭಿವೃದ್ಧಿ ಸೇರಿದಂತೆ ಮೊದಲಾದ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ 400 ಕೋಟಿಗೂ ಹೆಚ್ಚಿನ ಹಣವನ್ನು ನೀಡಿದ್ದಾರೆ. ಅದರಂತೆ, ಇಂದು ಹಲವಾರು ಕಾಮಗಾರಿಗಳು ಚಾಲನೆಯಲ್ಲಿವೆ. ಇನ್ನೂ ಅಗತ್ಯವಾಗಿ ಕೈಗೊಳ್ಳಬೇಕಾದ ಅಭಿವೃದ್ಧಿ ಕೆಲಸಕ್ಕೆ ಮುಂದಿನ ದಿನಗಳಲ್ಲಿ ಒತ್ತು ನೀಡಲಾಗುತ್ತದೆ ಎಂದರು.

ಜೊತೆಗೆ ಕಟ್ಟಡ ತ್ಯಾಜ್ಯದಿಂದ ಸಂಸ್ಕರಿಸಬಹುದಾದ ವಸ್ತುಗಳನ್ನು ಮರುಬಳಕೆ ಮಾಡುವುದಕ್ಕೆ ಸಾರ್ವಜನಿಕರು ಹೆಚ್ಚಿನ ಒತ್ತು ನೀಡಬೇಕು. ಕೆಡವಲಾಗುವ ಒಂದು ಕಟ್ಟಡದ ಜಲ್ಲಿ ಸೇರಿದಂತೆ ಮೊದಲಾದ ವಸ್ತುಗಳನ್ನು ಮರು ಬಳಕೆ ಮಾಡುವುದಕ್ಕೆ ಮುಂದಾದರೆ ನಿರ್ಮಾಣ ವೆಚ್ಚದಲ್ಲಿ ಶೇ.30ರಷ್ಟು ಉಳಿತಾಯವನ್ನು ಕಾಣಬಹುದು. ಅಲ್ಲದೇ, ಹಣವೂ ಉಳಿತಾಯವಾಗುವುದಲ್ಲದೇ ಪರಿಸರದ ಮೇಲೆನ ಒತ್ತಡವೂ ಕಡಿಮೆಯಾಗುತ್ತದೆ. ಮಾರುಕಟ್ಟೆಯಲ್ಲಿ ಬೇಡಿಕೆ ಸಮತೋಲನದಲ್ಲಿರುವುದಕ್ಕೆ ಕಾರಣವಾಗಲಿದೆ. ಅದಕ್ಕೂ ಮಿಗಿಲಾಗಿ ಪರಿಸರದ ಮೇಲಿನ ಶೋಷಣೆ ಕಡಿಮೆಯಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಜಿ.ಟಿ.ದೇವೇಗೌಡ ವಹಿಸಿದ್ದರು. ಉಪ ಮೇಯರ್ ವನಿತಾ ಪ್ರಸನ್ನ, ಪಾಲಿಕೆ ಸದಸ್ಯರಾದ ಎಂ.ಕೆ.ಶಂಕರ್, ಎಸ್.ಬಾಲು, ಸುಬ್ರಮಣ್ಯ, ಪ್ರಶಾಂತ್‌ಗೌಡ, ಜಗದೀಶ್, ಮೂಡಾ ಆಯುಕ್ತ ಮಹೇಶ್, ಪಾಲಿಕೆ ಆಯುಕ್ತ ಜಿ.ಜಗದೀಶ್ ಸೇರಿದಂತೆ ಮೊದಲಾದವರು ಹಾಜರಿದ್ದರು.

Leave a Reply

comments

Related Articles

error: