ಪ್ರಮುಖ ಸುದ್ದಿಮೈಸೂರು

ಯುವ ದಸರಾಕ್ಕೆ ಚಾಲನೆ : ಬೆರಳೆಣಿಕೆಯ ಪ್ರೇಕ್ಷಕರು : ತಾರಾ ಮೆರಗು ನೀಡಿದ ಸೃಜನ ಲೋಕೋಶ್, ರಚಿತಾರಾಮ್

ಮೈಸೂರು,ಸೆ.22:- ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಚಾಲನೆ ದೊರಕಿ ಎರಡನೇ ದಿನವನ್ನು ಪೂರೈಸುತ್ತಿದೆ. ದಸರಾದ ಪ್ರಮುಖ ಆಕರ್ಷಣೆ ಹಾಗೂ ಯುವಜನತೆಯನ್ನು ಸೂಜಿಗಲ್ಲಿನಂತೆ ಸೆಳೆಯುವ ಯುವದಸರಾದಲ್ಲಿ ಸದಾ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿತ್ತು. ಆದರೆ ಈ ಬಾರಿ ಜನರಿಲ್ಲದೇ ಖಾಲಿ ಆಸನಗಳೇ ಕಣ್ಣಿಗೆ ಗೋಚರಿಸುತ್ತಿದ್ದು, ಬಿಕೋ ಎನ್ನುತ್ತಿತ್ತು.

ಮೈಸೂರು ದಸರಾ ಮಹೋತ್ಸವದಲ್ಲಿನ ಪ್ರಮುಖ ಆಕರ್ಷಣೆ, ಯುವ ಮನಸ್ಸುಗಳನ್ನು ಮನಸೂರೆಗೊಳಿಸುವ, ಯುವಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುವ ಯುವ ದಸರಾಕ್ಕೆ ಶುಕ್ರವಾರ ಸಂಜೆ ಚಾಲನೆ ದೊರೆಯಿತು. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಯುವದಸರಾಗೆ  ಜಿಲ್ಲಾ ಉಸ್ತುವಾರಿ ಸಚಿವ  ಡಾ.ಎಚ್.ಸಿ.ಮಹದೇವಪ್ಪ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ನಮ್ಮ ಐಕ್ಯತೆ, ಅಖಂಡತೆ,ಸಮಗ್ರತೆ, ಕಾಪಾಡಲು ಯುವ ಜನತೆಯ ಸಹಭಾಗಿತ್ವ ಅಗತ್ಯ. ಧಾರ್ಮಿಕ ಸಹಿಷ್ಣುತೆ , ಕೋಮುವಾದ ಎಲ್ಲವನ್ನೂ ಮರೆತು ರಾಷ್ಟ್ರೀಯ ಭಾವೈಕ್ಯತೆ ಬೆಳೆಸಬೇಕು. ಯುವಕರು ಒಗ್ಗಟ್ಟಾಗಿದ್ದರೆ, ಭಾರತವನ್ನು ಯಾವ ದುಷ್ಟ ಶಕ್ತಿಗಳು ಒಡೆಯಲು ಸಾಧ್ಯವಿಲ್ಲ. ಈ ಯುವ ದಸರಾ ಕಾರ್ಯಕ್ರಮದ ಮೂಲಕ ಸಾಮಾಜಿಕ ನೈತಿಕತೆ ಹೆಚ್ಚಿಸುವಂತೆ ಮಾಡಲಿ ಎಂದು ಶುಭ ಹಾರೈಸಿದರು.

ನಟ ಸೃಜನ ಲೋಕೋಶ್, ನಟಿ ರಚಿತರಾಮ್ ಕಾರ್ಯಕ್ರಮಕ್ಕೆ ತಾರಾ ಮೆರಗು ನೀಡಿದರು.

ನಟ ಸೃಜನ್ ಲೋಕೇಶ್ ಮಾತನಾಡಿ, ಮೈಸೂರು ಎರಡು ಬಾರಿ ಸ್ವಚ್ಛನಗರಿ ಬಿರುದು ಪಡೆಕೊಂಡಿತ್ತು. ಆದರೆ ಕಳೆದ ಬಾರಿ ಮೈಸೂರು ಸ್ವಚ್ಛ ನಗರಿಯಲ್ಲಿ 5ನೇ ಸ್ಥಾನ ಪಡೆದುಕೊಂಡಿತ್ತು.  ಮುಂದಿನ ಬಾರಿ ಮತ್ತೆ ನಂ 1 ಸ್ಥಾನಕ್ಕೆ ಬರುವಂತೆ ನಾವು ಮೈಸೂರಿನಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.
ಹಲವಾರು ವರ್ಷಗಳ ಹಿಂದೆ ದಸರಾ ಮಹೋತ್ಸವದ ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್ ಮಾಡಿದರೆ 100 ರೂ. ಕೊಡುತ್ತಿದ್ದರು. ಆಗಲೇ ಮೊದಲ ಬಾರಿಗೆ ನಾನು ಸಾವಿರಾರು ಜನರನ್ನು ನೋಡಿದ್ದು. ನಾನು ಕೆಲಸ ಪ್ರಾರಂಭಿಸಿದ್ದು ಮೈಸೂರಿನಿಂದಲೇ. ಇನ್ನೂ ಮೈಸೂರಿನಿಂದ ಕೆಲಸಗಳನ್ನು ಮಾಡುತ್ತೇವೆ ಎಂದರು.
ಮೈಸೂರು ನನಗೆ ಬಹಳ ಇಷ್ಟವಾದ ಸ್ಥಳ. ಈ ನಗರದಲ್ಲಿ ಯಾವುದಾದರೂ ಒಂದು ಕಟ್ಟಡಕ್ಕೆ, ಉದ್ಯಾನಕ್ಕೆ ನಮ್ಮ ತಾತ ಸುಬ್ಬಯ್ಯ ನಾಯ್ಡು ಅವರ ಹೆಸರನ್ನು ಇಡಬೇಕು ಎಂಬುದು ನಮ್ಮ ತಂದೆಯ ಆಸೆಯಾಗಿತ್ತು. ಇದನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು

ಈ ಸಂದರ್ಭದಲ್ಲಿ ಮಹಾಪೌರ ಎಂ.ಜೆ.ರವಿಕುಮಾರ್, ಉಪಮಹಾಪೌರರಾದ ರತ್ನ ಲಕ್ಷ್ಮಣ್, ಶಾಸಕ ಎಂ.ಕೆ.ಸೋಮಶೇಖರ್, ಜಿಪಂ ಅಧ್ಯಕ್ಷೆ ನಯೀಮ ಸುಲ್ತಾನ್ ನಜೀರ್ ಅಹಮದ್, ಅರಗು ಮತ್ತು ಬಣ್ಣದ ಕಾರ್ಖಾನೆ ಅಧ್ಯಕ್ಷ ಎಚ್.ಎ.ವೆಂಕಟೇಶ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್, ಎಸ್ಪಿ ರವಿ ಡಿ.ಚೆನ್ನಣ್ಣನವರ್, ತಾಪಂ ಉಪಾಧ್ಯಕ್ಷ ಎನ್.ಬಿ.ಮಂಜು, ಯುವ ದಸರಾ ಉಪ ಸಮಿತಿ ಅಧ್ಯಕ್ಷ ಟಿ.ಎಚ್.ಮಂಜುನಾಥನ್, ಉಪಾಧ್ಯಕ್ಷರಾದ ಹಿನಕಲ್ ನಂಜುಂಡ, ಕಾರ್ಯಾಧ್ಯಕ್ಷ ಜಿ.ಜಗದೀಶ್ ಇತರರು ಉಪಸ್ಥಿತರಿದ್ದರು. (ಎಂ.ಎನ್)

Leave a Reply

comments

Related Articles

error: