ಕರ್ನಾಟಕ

ಪತ್ರಿಕಾ ರಂಗದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಬಲಯುತ : ಕೆ.ಜಿ.ಬೋಪಯ್ಯ ಅಭಿಪ್ರಾಯ

ರಾಜ್ಯ(ಮಡಿಕೇರಿ) ಸೆ.22 :-ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ವ್ಯವಸ್ಥಿತ ರೀತಿಯಲ್ಲಿ ಕಾರ್ಯ ನಿರ್ವಹಿಸಿದಾಗ ಮಾತ್ರ ದೇಶದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಬಲಯುತವಾಗಲು ಸಾಧ್ಯವೆಂದು ಶಾಸಕ ಕೆ.ಜಿ.ಬೋಪಯ್ಯ ಅಭಿಪ್ರಾಯಪಟ್ಟಿದ್ದಾರೆ.

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ “ಪ್ರಜಾಸತ್ಯ” ಪತ್ರಿಕೆಯ ದ್ವಿತೀಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪತ್ರಿಕಾರಂಗ ನಿರ್ಭೀತಿಯಿಂದ ಕಾರ್ಯ ನಿರ್ವಹಿಸುತ್ತಿರುವುದರಿಂದಲೇ ಇಂದಿಗೂ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನಕ್ಕೆ ಹೆಚ್ಚಿನ ಗೌರವವಿದೆ ಎಂದು ತಿಳಿಸಿದರು.  ಮಾಧ್ಯಮಗಳು ಯಾರ ಒತ್ತಡಕ್ಕೂ ಮಣಿಯದೆ ನೇರ ವರದಿಗಳ ಮೂಲಕ ಸಮಾಜದ ಒಳಿತಿಗಾಗಿ ಮತ್ತು ಜನಸಾಮಾನ್ಯರ ಅಭ್ಯುದಯಕ್ಕಾಗಿ ಕರ್ತವ್ಯ ನಿಷ್ಠೆಯನ್ನು ಮೆರೆಯಬೇಕೆಂದು ಬೋಪಯ್ಯ ಕರೆ ನೀಡಿದರು.

ಮಡಿಕೇರಿ ಕ್ಷೇತ್ರದ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ ಪತ್ರಿಕಾರಂಗ ತಮ್ಮ ಬರವಣಿಗೆಯ ಮೂಲಕ ಸಮಾಜವನ್ನು ಬದಲಾಯಿಸುವ ಕಾರ್ಯ ಮಾಡಬೇಕಾಗಿದೆ. ಮಾಧ್ಯಮಗಳು ಸಮಾಜಕ್ಕೆ ತಪ್ಪು ಮಾಹಿತಿಗಳನ್ನು ನೀಡದೆ ನೈಜ ಸುದ್ದಿಗಳನ್ನು ಭಿತ್ತರಿಸುವ ಮೂಲಕ ಸಮಾಜದ ಹಿತವನ್ನು ಕಾಪಾಡಬೇಕೆಂದು ಕಿವಿಮಾತು ಹೇಳಿದರು. ಆರೋಗ್ಯ ಕ್ಷೇತ್ರದಲ್ಲಿ ಸಧಾನೆ ಮಾಡಿದ ಡಾ. ಮನೋಹರ್ ಜಿ. ಪಾಟ್ಕರ್, ಸಾಹಿತ್ಯ ಕ್ಷೇತ್ರ ಬಿ.ಎ ಷಂಶುದ್ದೀನ್, ಜನಪದ ಕ್ಷೇತ್ರ ಬಾಚರಣಿಯಂಡ ಪಿ. ಅಪ್ಪಣ್ಣ, ಪರಿಸರ ಕ್ಷೇತ್ರ ಡಾ.ಎಸ್.ವಿ.ನರಸಿಂಹನ್, ಪತ್ರಿಕೋದ್ಯಮ ಕ್ಷೇತ್ರ ಸುನಿಲ್ ಪೊನ್ನೇಟಿ, ಕ್ರೀಡಾ ಕ್ಷೇತ್ರ ಪಿ.ಇ.ನಂದ, ಶಿಕ್ಷಣ ಕ್ಷೇತ್ರ ಕೆ.ಎ. ರಾಮಚಂದ್ರ, ತೋಟಗಾರಿಕಾ ಕ್ಷೇತ್ರ ಪೊನ್ನಚೆಟ್ಟೀರ ಸುರೇಶ್ ಸುಬ್ಬಯ್ಯ, ಕೃಷಿ ಕ್ಷೇತ್ರ ಮಂದ್ರೀರ ತೇಜಸ್ ನಾಣಯ್ಯ, ಸಮಾಜಸೇವೆ ಮುರುಗೇಶ್, ಎಂ.ಎಚ್.ಮಹಮ್ಮದ್ ಮುಸ್ತಫ, ಸುಗಮ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಚೇಂದಿರ ನಿರ್ಮಲ ಬೋಪಣ್ಣ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಪ್ರಜಾಸತ್ಯ ಪತ್ರಿಕೆಯ ಸಂಪಾದಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಬಿ.ಸಿ ನವೀನ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ,ಕೊಡಗು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಡಾ.ಪಿ.ರಾಜೇಂದ್ರ ಮತ್ತಿತರರು ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: