ಕರ್ನಾಟಕಪ್ರಮುಖ ಸುದ್ದಿಮೈಸೂರು

ಸೈನಿಕ ಶಾಲೆ ಕೊಡಗು – 6 ಮತ್ತು 9 ನೇ ತರಗತಿಯ ದಾಖಲಾತಿಗೆ ಪ್ರವೇಶ ಪರೀಕ್ಷೆ

ಬೆಂಗಳೂರು, ಸೆ.23 : ಕೊಡಗು ಸೈನಿಕ ಶಾಲೆ 2018-19 ಸಾಲಿನ 6 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳ ದಾಖಲಾತಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ. ವಿದ್ಯಾರ್ಥಿಗಳನ್ನು ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ಭಾರತೀಯ ನೌಕ ಅಕಾಡೆಮಿಗೆ ಸೇರಿಸಲು ಶೈಕ್ಷಣಿಕವಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ತರಬೇತಿಗೊಳಿಸಲಾಗುವುದು.

6ನೇ ತರಗತಿಗಾಗಿ 2 ಜುಲೈ 2007 ರಿಂದ 1 ನೇ ಜುಲೈ 2005 ರೊಳಗೆ ಅಭ್ಯರ್ಥಿಯು ಜನಿಸಿರಬೇಕು. 9 ನೇ ತರಗತಿಗಾಗಿ 02 ಜುಲೈ 2004 ರಿಂದ 01 ನೇ ಜುಲೈ 2005 ರೊಳಗೆ ಅಭ್ಯರ್ಥಿಯು ಜನಿಸಿರಬೇಕು. ಅಲ್ಲದೆ ಮಾನ್ಯತೆ ಪಡೆದ ಶಾಲೆಯಲ್ಲಿ 8ನೇ ತರಗತಿ ವಿದ್ಯಾಭ್ಯಾಸ ಮಾಡಿರಬೇಕು.

ಅಭ್ಯರ್ಥಿಯನ್ನು ಅಖಿಲ ಭಾರತ ಮಟ್ಟದ ಸೈನಿಕ ಶಾಲಾ ಪ್ರವೇಶ ಪರೀಕ್ಷೆ, ಮೌಖಿಕ ಸಂದರ್ಶನ ಮತ್ತು ವೈದ್ಯಕೀಯ ತಪಾಸಣೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆಮಾಡಲಾಗುವುದು.  6ನೇ ಮತ್ತು 9 ನೇ ತರಗತಿಯ ಪ್ರಶ್ನೆಪತ್ರಿಕೆಗಳು ಕ್ರಮವಾಗಿ 5 ನೇ ಹಾಗೂ 8ನೇ ತರಗತಿಯ ಸಿಬಿಎಸ್‍ಸಿ ಪಠ್ಯಕ್ರಮದ ಆಧಾರದಲ್ಲಿರುತ್ತದೆ.

6ನೇ ತರಗತಿಗೆ 90 ರಿಂದ 100 ಸೀಟುಗಳಿದ್ದು, 9 ನೇ ತರಗತಿಗಾಗಿ 15-20 ಸೀಟುಗಳಿದ್ದು, ಪರಿಶಿಷ್ಟ ಜಾತಿಯವರಿಗೆ ಶೇ 15 ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇ 7.5 ಹಾಗೂ ರಕ್ಷಣ ಇಲಾಖೆಯವರಿಗೆ ಶೇ 25 ರಷ್ಟು ಮೀಸಲಾತಿ ಇರುತ್ತದೆ. ಪ್ರಸ್ತುತ ವಾರ್ಷಿಕ ಶೈಕ್ಷಣಿಕ ತರಬೇತಿ ಶುಲ್ಕ ಮತ್ತು ಆಹಾರದ ಶುಲ್ಕ ಒಳಗೊಂಡಂತೆ ರೂ 1,07,000 ಆಗಿರುತ್ತದೆ. ಪ್ರತಿವರ್ಷ ಶೇ 10 ರಷ್ಟು ಶುಲ್ಕವು ಹೆಚ್ಚಾಗುವ ಸಾಧ್ಯತೆಯಿದ್ದು ಇತರೆ ಖರ್ಚುಗಳು ಅನ್ವಯಿಸುವ ದರದಲ್ಲಿ ಭರಿಸತಕ್ಕದ್ದು.

ಉತ್ತಮ ಶ್ರೇಣಿ, ಆದಾಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ವೇತನವನ್ನು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು. ರಕ್ಷಣಾ ಇಲಾಖೆ ವಿದ್ಯಾರ್ಥಿ ವೇತನವನ್ನು ಹಾಲಿ ಸೇವೆ ಸಲ್ಲಿಸುತ್ತಿರುವ, ಸೇವೆಯಿಂದ ನಿವೃತಿ ಹೊಂದಿರುವ ರಕ್ಷಣಾ ಇಲಾಖಾ ಯೋಧರ ಮಕ್ಕಳಿಗೆ ನೀಡಲಾಗುವುದು.

ಅರ್ಜಿಗಾಗಿ ಅಕ್ಟೋಬರ್, ನವೆಂಬರ್ 2017 ರಲ್ಲಿ ಶಾಲೆಯ ವೆಬ್‍ಸೈಟ್ www.sainikschoolkodagu.edu.in ಅನ್ನು ಸಂಪರ್ಕಿಸಿ ಮಾಹಿತಿ ಪುಸ್ತಕ, ಅರ್ಜಿಯನ್ನು ಡೌನ್‍ಲೋಡ್ ಮಾಡಬಹುದು ಅಥವಾ ಶಾಲೆಯಿಂದ ಖುದ್ದಾಗಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಶಾಲೆಯ ದೂರವಾನಿ 08276-278963 ಅನ್ನು ಸಂಪರ್ಕಿಸಬಹುದು.

(ಎನ್.ಬಿ)

Leave a Reply

comments

Related Articles

error: