
ಪ್ರಮುಖ ಸುದ್ದಿ
ವಾರಣಾಸಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಮೋದಿ ಶಿಲಾನ್ಯಾಸ
ಪ್ರಮುಖ ಸುದ್ದಿ, ವಾರಣಾಸಿ, ಸೆ.೨೩: ಸ್ವಚ್ಚ ಭಾರತ ಅಭಿಯಾನದಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಣಾಸಿಯ ಷಹನ್ ಷಹಾಪುರ್ನಲ್ಲಿ ಶನಿವಾರ ಶೌಚಾಲಯ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಿದರು.
ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ಎರಡು ದಿನಗಳ ಪ್ರವಾಸಲ್ಲಿರುವ ಅವರು ಶನಿವಾರ ಶೌಚಾಲಯ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. ಷಹನ್ಷಾಪುರದ ಪಶುಧನ್ ಆರೋಗ್ಯ ಮೇಳಕ್ಕೆ ಚಾಲನೆ ನೀಡಿದ್ದು, ರೈತರನ್ನು ಉzಶಿಸಿ ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಫಲಾನುಭವಿಗಳಿಗೆ ಪ್ರಮಾಣಪತ್ರ ನೀಡಲಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ವಾರಾಣಸಿ ಭೇಟಿಯಲ್ಲಿರುವ ಪ್ರಧಾನಿ ಮೋದಿ ಶುಕ್ರವಾರ ಹಲವು ಯೋಜನೆ ಹಾಗೂ ಕಾರ್ಯಕ್ರಮಗಳಿಗೆ ಚಾಲನೆ ನೀಡಿ, ೧೦೦೦ ಕೋಟಿ ವೆಚ್ಚದ ಯೋಜನೆಗಳು ಸಿಎಂ ಯೋಗಿ ಆದಿತ್ಯಾನಾಥ್ ಅವರ ಆಡಳಿತದಲ್ಲಿ ಪೂರ್ಣಗೊಳ್ಳಲಿದೆ ಎಂದು ಘೋಷಿಸಿದರು.
ರಾಜ್ಯಪಾಲ ರಾಮ್ ನಾಯಕ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗ್ರಾಮೀಣಾಭಿವೃದ್ಧಿ ಸಚಿವ ಮಹೇಂದ್ರ ಸಿಂಗ್ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮಹೇಂದ್ರ ನಾಥ್ ಪಾಂಡೆ ಅವರು ಉಪಸ್ಥಿತರಿದ್ದರು. (ವರದಿ ಬಿ.ಎಂ)