ಪ್ರಮುಖ ಸುದ್ದಿಮೈಸೂರು

ಕಲಾಮಂದಿರ ಹೌಸ್ ಫುಲ್ : ಭವ್ಯ ಭವಿಷ್ಯದ ವ್ಯಕ್ತಿತ್ವ ವಿಕಸನ ಕುರಿತು ಮಾಹಿತಿ ನೀಡಿದರು ಅಧಿಕಾರಿಗಳು

ಮೈಸೂರು,ಸೆ.23:- ಅಲ್ಲಿ ಯಾವುದೇ ಹಾಸ್ಯಚಟಾಕಿಯನ್ನು ಹಾರಿಸುವ ಮಾತುಗಳಿರಲಿಲ್ಲ. ಅಥವಾ ಮನರಂಜನೆಯೂ ಇರಲಿಲ್ಲ ಆದರೂ ಅಲ್ಲಿ ಅಷ್ಟೊಂದು ಯುವಜನತೆ ಸೇರಿದ್ದರು. ಒಳಗಡೆ ಕುಳಿತುಕೊಳ್ಳಲು ಜಾಗ ಸಾಲದಿರುವುದಕ್ಕೆ ಕೆಲವರು ನಿಂತಿದ್ದರು. ಇನ್ಕೆಲವರಿಗೆ ಹೊರಗಿನಿಂದಲೂ ನೋಡುವಂತೆ ಎಲ್ ಇಡಿಗಳನ್ನು ಅಳವಡಿಸಲಾಗಿತ್ತು. ಯುವ ಪ್ರಜೆಗಳು ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳುವ ಕುರಿತು, ದೇಶ ಮುನ್ನಡೆಸುವ ಕುರಿತು ಚಿಂತನೆ ನಡೆಸಲು ಅಲ್ಲಿ ಸೇರಿದ್ದರು .ಹಾಗಾದರೆ ಅಲ್ಲಿ ಅಷ್ಟೊಂದು ಜನರು ಸೇರುವಂಥದ್ದು ಏನಿತ್ತು..?

ಮೈಸೂರು ಕಲಾಮಂದಿರಲ್ಲಿ ದಸರಾ ಮಹೋತ್ಸವ ಪ್ರಯುಕ್ತ ಯುವದಸರಾ ಉಪಸಮಿತಿ ಯುವ ಅನ್ವೇಷಣೆ – ಯು.ಪಿ.ಎಸ್.ಸಿ. ಸ್ಪರ್ಧಾತ್ಮಕ ಪರೀಕ್ಷೆ ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ಆಯೋಜಿಸಿತ್ತು.  ಕಾರ್ಯಾಗಾರದಲ್ಲಿ ಪಾಲ್ಗೊಂಡ ಬೆಳಗಾವಿ ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಮಚಂದ್ರ ಮಾತನಾಡಿ ಅನ್ನವಿಲ್ಲದವನಿಗೆ ಹಸಿವಿನ ಕುರಿತು ಚೆನ್ನಾಗಿ ತಿಳಿದಿರುತ್ತದೆ. ಹಾಗೇ ಗುರಿ ಇದ್ದವನಿಗೆ ತಾನು ತಲುಪಬೇಕಾಗಿರುವುದೆಲ್ಲಿ ಎನ್ನುವುದರ ಅರಿವಿರುತ್ತದೆ ಎಂಬುದನ್ನು ಕೊಕ್ಕರೆ ಒಂಟಿ ಕಾಲಿನಲ್ಲಿ ನಿಂತು ಯಾವ ರೀತಿ ತನ್ನ ಗುರಿ ಸಾಧಿಸುತ್ತದೆ ಎಂಬುದನ್ನು ಉದಾಹರಣೆ ಸಹಿತ ವಿವರಿಸಿದರು. ಯುಪಿಎಸ್ ಸಿ ಪರೀಕ್ಷೆಗೆ ಕುಳಿತವರಿಗೆ ಪ್ರತಿಯೊಂದು ವಿಷಯವೂ ಟಾಸ್ಕ್ ಇದ್ದ ಹಾಗೆ. ಅವುಗಳನ್ನು ರೂಢಿಸಿಕೊಂಡಾಗ ಎಂಥಹುದೇ ಜಟಿಲ ಸಮಸ್ಯೆಯಿದ್ದರೂ ಅದರಿಂದ ಹೊರಬಹುದು ಎಂದರು. ಈಗಂತೂ ಇಂಟರ್ನೆಟ್ ಬಳಕೆಯಲ್ಲಿದ್ದು ಅವುಗಳನ್ನು ಏನಕ್ಕಾಗಿ ಉಪಯೋಗಿಸಿಕೊಳ್ಳಬೇಕು ಎಂಬುದನ್ನು ಅರಿತುಕೊಳ್ಳಿ. ನಮ್ಮಲ್ಲಿರುವ ವಸ್ತುಗಳನ್ನು ಯಾವರೀತಿ ಬಳಸಬೇಕು ಎಂಬುದನ್ನು ಅರಿತುಕೊಳ್ಳಿ. ಆಗ ಯಶಸ್ಸು ಸುಲಭವಾಗಿ ನಿಮ್ಮ ಕೈ ಸೇರಲಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಿ.ರಂದೀಪ್ ಮಾತನಾಡಿ ಭಾರತದಲ್ಲಿ ಈಗ ಯುವಜನತೆಗೆ ಅವಕಾಶಗಳು ತೆರೆದುಕೊಳ್ಳುತ್ತಿವೆ. ಭಾರತ ಸೂಪರ್ ಪವರ್ ಆಗುತ್ತಿದೆ. ಯುವಕರಿಗೆ ಸಿಗುವಂತಹ ಅವಕಾಶಗಳನ್ನು ಬಳಸಿಕೊಳ್ಳಲು ಯುವಜನತೆ ಮುಂದೆ ಬರಬೇಕು. ಯಾವುದೇ ಕೆಲಸವಾದರೂ ಒಮ್ಮೆಲೆ ಯಶಸ್ಸು ಕಾಣಲು ಸಾಧ್ಯವಿಲ್ಲ. ಹಲವು ಪ್ರಯತ್ನಗಳು ನಡೆಯಬೇಕು. ನಾನೂ ಕೂಡ ಒಮ್ಮೆಲೆ ಐಎಎಸ್ ಪಾಸು ಮಾಡಿದ್ದಲ್ಲ. ನಾಲ್ಕನೇ ಪ್ರಯತ್ನಕ್ಕೆ ನನಗೆ ಯಶಸ್ಸು ಲಭಿಸಿತು. ಈಗ ನಡೆಯುತ್ತಿರುವ ವಿಷಯಗಳ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕು. ಯಶಸ್ಸಿನ ಹಿಂದೆ ನಾವು ಹೋಗಬೇಕು ಎಂದು ತಿಳಿಸಿದರು. ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಜಿ.ಜಗದೀಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್, ದಸರಾ ಉಪಸಮಿತಿಯ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಇಂಧನ್ ಬಾಬು, ನಂಜುಂಡ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಾಗಾರದ ಕುರಿತು ಮೈಸೂರಿನ ವಿದ್ಯಾರ್ಥಿನಿ ಶುಭಂಕರಿ ಮಾತನಾಡಿ ಇಂತಹ ಕಾರ್ಯಕ್ರಮಗಳನ್ನು ದಸರಾ ಸಂದರ್ಭದಲ್ಲಿ ಆಯೋಜಿಸಿರುವುದು ಖುಷಿ ನೀಡಿದೆ. ಮೈಸೂರಿನ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಯುಪಿಎಸ್ ಸಿ ಗೆ ಯಾವರೀತಿ ಅಭ್ಯಾಸವನ್ನು ನಡೆಸಬೇಕು ಎನ್ನುವುದನ್ನು ಕೂಲಂಕುಷವಾಗಿ ವಿವರಿಸಿದ್ದಾರೆ. ನಮಗೆ ತುಂಬಾ ಸಹಾಯವಾಗಲಿದೆ ಎಂದರು.

ಕಾರ್ಯಾಗಾರದಲ್ಲಿ ಸರಿಸುಮಾರು ಮೂರುಸಾವಿರಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಆಗಮಿಸಿ ಕಾರ್ಯಾಗಾರದ ಪ್ರಯೋಜನವನ್ನು ಪಡೆದುಕೊಂಡರಲ್ಲದೇ, ಹಲವು ಪ್ರಶ್ನೆಗಳಿಗೆ ಉತ್ತರವನ್ನು ದೊರಕಿಸಿಕೊಂಡರು.

(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: