ಪ್ರಮುಖ ಸುದ್ದಿಮೈಸೂರು

ಬೇಕಾ ಬಿಟ್ಟಿಯಾಗಿ ಕಸ ಚೆಲ್ಲಿದರೆ ಹುಷಾರ್.. ಲೈಸೆನ್ಸ್ ರದ್ದಾಗುವುದು : ಖಡಕ್ ಎಚ್ಚರಿಕೆ

ಮೈಸೂರು,ಸೆ.23 : ಕಸವನ್ನು ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯಯಿಂದ ಬಿಸಾಡಿದರೇ ಹುಷಾರು, ದಂಡ ವಿಧಿಸುವುದರೊಂದಿಗೆ ಅಂಗಡಿ ಲೈಸೆನ್ಸ್ ರದ್ದಾಗೊಳಿಸಲಾಗುವುದು ಎಂದು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಅಂಗಡಿ ಮಳಿಗೆಗಳಿಗೆ ದಸರಾ ಸ್ವಚ್ಛತಾ ಸಮಿತಿ ಕಾರ್ಯದರ್ಶಿ ಹಾಗೂ ಪಾಲಿಕೆ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಎಚ್ಚರಿಕೆ ನೀಡಿದರು.

ಆಹಾರ ಮಳಿಗೆ, ದಸರಾ ವಸ್ತು ಪ್ರದರ್ಶನ ಮಳಿಗೆಗಳಿಗೆ ಲೈಸನ್ಸ್ ನೀಡುವಾಗಲೇ ಸೂಕ್ತ ತ್ಯಾಜ್ಯ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸಿ ನೀಲಿ ಮತ್ತು ಹಸಿರು ಬಣ್ಣ ಡಬ್ಬಿಗಳನ್ನು ನೀಡಲಾಗಿದ್ದು ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ನಿಯಮ ಮೀರಿದರೆ ಅಂತಹ ಮಳಿಗೆಯ ಮೇಲೆ ದಂಡ ವಿಧಿಸಿ, ಲೈಸೆನ್ಸ್ ರದ್ದುಗೊಳಿಸಲಾಗುವುದು ಎಂದು ಇಂದು ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಖಡಕ್ ಎಚ್ಚರಿಕೆ ನೀಡಿದರು.

280 ಪೌರ ಕಾರ್ಮಿಕರು ಸೇರಿದಂತೆ, ಉಪಸಮಿತಿಯ ಸದಸ್ಯರು ಸ್ವಚ್ಛತೆ ಬಗ್ಗೆ ನಿಗಾವಹಿಸಲಾಗಿದೆ. 11 ರಿಂದ ಮಧ್ಯರಾತ್ರಿ 1 ಗಂಟೆವರೆಗೆ ಗಸ್ತು ತಿರುಗಿ ಸ್ವಚ್ಛತಾ ಕಾರ್ಯ ಹಾಗೂ ಸಮೀಕ್ಷೆ ನಡೆಸಲಾಗುತ್ತಿದೆ ಎಂದ ಅವರು, ಮೈಸೂರು ನಗರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪ್ರವಾಸಿಗರು ಸೇರಿದಂತೆ ಸಾರ್ವಜನಿಕರು ನಮ್ಮೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಸ್ವಚ್ಚ ನಗರಿ ಮೈಸೂರಿನಲ್ಲಿ ನಾಡ ಹಬ್ಬ ಸಂದರ್ಭದಲ್ಲಿಯೂ ಸ್ವಚ್ಚತೆಗೆ ಪ್ರಮುಖ ಆಧ್ಯತೆ ನೀಡಲಾಗಿದ್ದು ಈ ನಿಟ್ಟಿನಲ್ಲಿ ಪೌರಕಾರ್ಮಿಕರು ಸೇರಿದಂತೆ ಸ್ವಚ್ಛತಾ ಉಪಸಮಿತಿ ಸದಸ್ಯರು ಹಗಲಿರುಳಿ ಶ್ರಮಿಸುತ್ತಿದೆ ಎಂದು ದಸರಾ ಸ್ವಚ್ಛತಾ ಉಪಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದರು.

ದಸರಾ ಮಹೋತ್ಸವದ ಪ್ರಮುಖ ಸ್ಥಳಗಳಾದ ಅರಮನೆ, ಚಾಮುಂಡಿ ಬೆಟ್ಟ, ವಸ್ತು ಪ್ರದರ್ಶನ, ಮೃಗಾಲಯ, ಜೆ.ಕೆ.ಗ್ರೌಂಡ್ಸ್, ಆಹಾರ ಮೇಳದ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನಗಳಲ್ಲಿ ಸೂಕ್ತ ಕಸ ವಿಲೇವಾರಿಗೆ ಅಡಿಯೋ, ವಿಡಿಯೋ ಭಿತ್ತರಿಸುವ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಕಳೆದ ಸೆ.15ರಿಂದಲೂ ಜಿಲ್ಲಾಧಿಕಾರಿಗಳೊಂದಿಗೆ ಅಧಿಕಾರೇತರ ತಂಡ ರಚಿಸಿಕೊಂಡು ದಸರಾ ಮಹೋತ್ಸವದಲ್ಲಿ ರಾತ್ರಿ ಪಾಳಿಯಲ್ಲಿ ಸ್ವಚ್ಛತಾ ಕಾರ್ಯಕೈಗೊಳ್ಳಲಾಗಿದೆ. ಮಾಹಿತಿ, ಕುಂದು ಕೊರತೆ ತಿಳಿಸಲು ಮೊ.ನಂ. 9035040790 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ  ಸ್ವಚ್ಛತಾ ಉಪಸಮಿತಿಯು ಸ್ವಚ್ಚತೆ ಬಗ್ಗೆ ಜಾಗೃತಿ ಹಾಗೂ ಅರಿವಿನ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

ಉಪ ಸಮಿತಿ ಸದಸ್ಯರಾದ ಲೀಲಾ ಪಂಪಾಪತಿ, ಪುಟ್ಟಣ್ಣಯ್ಯ, ಮುದ್ದುರಂಗಯ್ಯ, ಎಂ.ನಾಗರಾಜಯ್ಯ, ಶಿವಕುಮಾರ್, ಎ.ಆರ್.ಕಾಂತರಾಜ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: