ಕರ್ನಾಟಕ

 ಸೆ.3 : ನಿವೃತ್ತ ಪೊಲೀಸ್ ಅಧಿಕಾರಿಗಳ ಸ್ನೇಹ ಮಿಲನ ಕಾರ್ಯಕ್ರಮ

ರಾಜ್ಯ(ಮಡಿಕೇರಿ) ಸೆ.23 :- ಕೊಡಗು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ಮತ್ತು ಸ್ನೇಹ ಮಿಲನ ಕಾರ್ಯಕ್ರಮ ಅಕ್ಟೋಬರ್ 3 ರಂದು ನಗರದ ಪೊಲೀಸ್ ಸಮುದಾಯ ಭವನ ಮೈತ್ರಿಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಇಲಾಖೆಯಲ್ಲಿ ಸಾಧನೆಗೈದ ಪೊಲೀಸ್ ಅಧಿಕಾರಿಗಳನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದೆಂದು ಸಂಘದ ಅಧ್ಯಕ್ಷರಾದ ಎಂ.ಎ.ಅಪ್ಪಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಅಕ್ಟೋಬರ್ 3 ರಂದು ಬೆಳಗ್ಗೆ 11.30 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಐಜಿಪಿ ರೂಪ ಕುಮಾರ್ ದತ್ತ, ಎಡಿಜಿಪಿ ಕಮಲ್ ಪಂತ್, ದಕ್ಷಿಣ ವಲಯದ ಐಜಿಪಿ ವಿಪುಲ್ ಕುಮಾರ್, ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಹಾಗೂ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.

ಸಭೆಯಲ್ಲಿ ಸಂಘದ ಚಟುವಟಿಕೆ, ಆರ್ಥಿಕ ಸ್ಥಿತಿ ಗತಿ ಮತ್ತು ಆರೋಗ್ಯ ಯೋಜನೆಯ ಬಗ್ಗೆ ಚರ್ಚಿಸಲಾಗುವುದೆಂದು ಎಂ.ಎ.ಅಪ್ಪಯ್ಯ ಹೇಳಿದರು. ರಾಜ್ಯ ಸರ್ಕಾರ ಈಗಾಗಲೆ ನಿವೃತ್ತ ಪೊಲೀಸರ ಆರೋಗ್ಯ ನಿಧಿಗಾಗಿ 20 ಕೋಟಿ ರೂ.ಗಳನ್ನು ಘೋಷಣೆ ಮಾಡಿದ್ದು, ಇದರ ಫಲಾನುಭವಿಗಳ ಆಯ್ಕೆಯ ಬಗ್ಗೆಯೂ ಸಭೆಯಲ್ಲಿ ಸಮಾಲೋಚಿಸಲಾಗುವುದೆಂದರು. ನಿವೃತ್ತ ಪೊಲೀಸ್ ಅಧಿಕಾರಿಗಳ ಸಮಸ್ಯೆಗಳ ಕುರಿತು ಹಿರಿಯ ಅಧಿಕಾರಿಗಳ ಗಮನ ಸೆಳೆಯಲಾಗುವುದು. ಪೊಲೀಸ್ ಸಿಬ್ಬಂದಿಗಳ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಿಸುವ ಕಾರ್ಯಕ್ರಮ ಕೂಡ ನಡೆಯಲಿದೆ. ಮಣವಟ್ಟೀರ ಪೊನ್ನಪ್ಪ ಸ್ಮರಣಾರ್ಥ ರಾಜ್ಯದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ಮತ್ತು ಉಡುಪಿಯ ಆಚಾರ್ಯ ಅವರು ತಮ್ಮ ತಾಯಿ ಸರಸ್ವತಿ ಅವರ ಹೆಸರಿನಲ್ಲಿ ನೀಡಿರುವ ದತ್ತಿನಿಧಿಯಡಿ ಈ ಬಾರಿ ಇಬ್ಬರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭ ರಾಷ್ಟ್ರಪತಿ ಪದಕ ವಿಜೇತರಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಮಂಡುವಂಡ ಕೆ.ಗಣೇಶ್, ಪಂದಿಕಂಡ ಸುಬ್ಬಯ್ಯ ಅವರುಗಳನ್ನು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಾದ ನಿವೃತ್ತ ಪಿ.ಎಂ.ಪೆಮ್ಮಯ್ಯ ಹಾಗೂ ಕೆ.ಎಸ್.ಕುಮಾರ್ ಕರ್ನಿಂಗ್ ಅವರುಗಳನ್ನು ಸನ್ಮಾನಿಸಲಾಗುವುದೆಂದು ಅಪ್ಪಯ್ಯ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಪರಮಶಿವ, ಕಾರ್ಯದರ್ಶಿ ಅಚ್ಯುತ ನಾಯರ್, ಸಲಹೆಗಾರರಾದ ಪೂಣಚ್ಚ, ನಿರ್ದೇಶಕರುಗಳಾದ ಮಾದಯ್ಯ ಹಾಗೂ ಚೀಯಣ್ಣ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: