ಮೈಸೂರು

ಸದಭಿರುಚಿಯ ಚಿತ್ರಗಳಿಗೆ ಮನಸೋತ ಪ್ರೇಕ್ಷಕರು

ಮೈಸೂರು, ಸೆ.೨೩: ದಸರಾ ಮಹೋತ್ಸವದ ಅಂಗವಾಗಿ ಮೊದಲ ಬಾರಿಗೆ ನಗರದ ಡಿಆರ್‌ಸಿ ಮತ್ತು ಐನಾಕ್ಸ್ ನಲ್ಲಿ ಆಯೋಜಿಸಲಾಗಿರುವ ಚಲನಚಿತ್ರೋತ್ಸವ ಸಿನಿಮಾಸಕ್ತರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಶನಿವಾರ ಯುವಮನಸ್ಸುಗಳ ಪ್ರಶಂಸೆಗೆ ಪಾತ್ರವಾದ ಕಿರಿಕ್ ಪಾರ್ಟಿ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು. ಚಿತ್ರೊತ್ಸವ ಕಲಾವಿದರು, ತಂತ್ರಜ್ಞರನ್ನು ಹಾಗೂ ಪ್ರೇಕ್ಷಕರನ್ನು ಒಂದೆಡೆ ತರುವಲ್ಲಿ ಯಶಸ್ವಿಯಾಯಿತು. ಅಮರಾವತಿ ಚಿತ್ರದ ನಿರ್ದೆಶಕ ಬಿ.ಎಂ. ಗಿರಿರಾಜ್ ಅವರು ಪಾಲ್ಗೊಂಡಿದ್ದು ಪ್ರೇಕ್ಷರಿಗೆ ವಿಶೇಷ ಅನುಭವ ನೀಡಿತು.
ಮೈಸೂರು ದಸರಾ ಚಲನಚಿತ್ರೋತ್ಸವ ಉಪಸಮಿತಿ ವಿಶೇಷಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ ಮಾತನಾಡಿ ಚಲನಚಿತ್ರಗಳನ್ನು ಸಿನೆಮಾ ಮಂದಿರದಲ್ಲಿ ವೀಕ್ಷಿಸುವ ಅನುಭವ ಕೊಡುವಲ್ಲಿ ಚಿತ್ರೋತ್ಸವ ಯಶಸ್ವಿಯಾಗಿದೆ. ಪ್ರೇಕ್ಷಕರು ಡಿಆರ್‌ಸಿ ಮತ್ತು ಐನಾಕ್ಸ್‌ನಲ್ಲಿ ನಡೆಯುತ್ತಿರುವ ಚಿತ್ರಗಳನ್ನು ನೋಡಿ, ಸಂವಾದ ಹಾಗೂ ವಿಚಾರ ವಿನಿಮಯದಲ್ಲಿ ತೊಡಗಿದ್ದಾರೆ. ಸೆ.೨೨ ರಂದು ಡಿಆರ್‌ಸಿ ಚಿತ್ರಮಂದಿರದಲ್ಲಿ ಆಕೆ ಚಿತ್ರ ಉತ್ತಮ ಪ್ರದರ್ಶನ ಕಂಡಿತು. ಹಿರಿಯ ಚಿತ್ರ ನಟ ಲಿಫ್ಟ್ ಮ್ಯಾನ್ ಚಿತ್ರದಲ್ಲಿ ನಟಿಸಿರುವ ಸುಂದರ್ ರಾಜ್ ಅವರು ಚಿತ್ರಮಂದಿರಕ್ಕೆ ಭೇಟಿ ನೀಡಿ ಪ್ರೇಕ್ಷಕರೊಡನೆ ಚಿತ್ರದ ಬಗ್ಗೆ ಚರ್ಚೆ ಮಾಡಿದರು.
ಡಿಆರ್‌ಸಿ ಚಿತ್ರಮಂದಿರದ ಮಾಲೀಕ ವೈಶಾಲಿ ಮಾತನಾಡಿ, ಮೈಸೂರು ದಸರಾ ಚಿತ್ರೋತ್ಸವ ಯಶಸ್ವಿಯಾಗಿ ನಡೆದಿದೆ. ಕನ್ನಡದ ಸದಭಿರುಚಿಯ ಚಿತ್ರಗಳನ್ನು ಪ್ರೇಕ್ಷಕರು ಇಷ್ಟಪಟ್ಟು ನೋಡುತ್ತಿದ್ದಾರೆ. ಯಶಸ್ವಿ ಚಿತ್ರ ಕಿರಿಕ್ ಪಾರ್ಟಿ ತುಂಬಿದ ಪ್ರದರ್ಶನ ಕಂಡಿದೆ ಹಾಗೂ ಚಿತ್ರೋತ್ಸವ ಇನ್ನಷ್ಟು ನಿರೀಕ್ಷೆ ಹುಟ್ಟಿಸಿದೆ ಎಂದರು.
ಐನಾಕ್ಸ್ ನಲ್ಲಿ ಹಿರಿಯ ನಿರ್ದೆಶಕ ಸುರೇಶ್ ಹೆಬ್ಳಿಕರ್ ಅವರ ಮನ ಮಂಥನ ತುಂಬಿದ ಪ್ರದರ್ಶನ ಕಂಡಿತು. ನಂತರ ನಿರ್ದೆಶಕರು ವೀಕ್ಷಕರ ಜೊತೆ ಸಂವಾದ ನಡೆಸಿದರು. ಚಿತ್ರದ ಭಾಷೆ ಹಾಗೂ ನಿರೂಪಣೆ ಕುರಿತಾಗಿ ಸಂವಾದ ಸಾಗಿತು. ಹಾಗೆಯೆ ರಷ್ಯ ಕ್ರಾಂತಿಗೆ ನೂರರ ಸಂದರ್ಭದಲ್ಲಿ ಇದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಈ ಮೊದಲು ಸಣ್ಣ ಪರದೆಯಲ್ಲಿ ಚಿತ್ರ ವಿಕ್ಷಿಸಿದ ಪ್ರೇಕ್ಷಕರು ಸಿನಿಮಾ ಮಂದಿರದಲ್ಲಿ ದಶಕಗಳ ಹಿಂದಿನ ಚಿತ್ರ ನೋಡಿ ಪುಳಕಿತರಾದರು ಎಂದು ಯೋಗೇಶ ತಿಳಿಸಿದರು.
ಚಿತ್ರೋತ್ಸವದ ಆರ್ಟಿಸ್ಟಿಕ್ ಡೈರೆಕ್ಟರ್ ಮನು ಮಾತನಾಡಿ, ಚಿತ್ರೋತ್ಸವದ ಪ್ರಯುಕ್ತ ಭಾನುವಾರ ಮೈಸೂರು ಕೇಂದ್ರ ಕಾರಾಗೃಹದಲ್ಲಿ ರಾಮ ರಾಮ ರೇ ಚಿತ್ರ ವಿಶೇಷ ಪ್ರದರ್ಶನ ಸಂಜೆ ೪ಕ್ಕೆ ಏರ್ಪಡಿಸಲಾಗಿದೆ. ಇದು ಕನ್ನಡದ ಉತ್ತಮ ಚಿತ್ರವಾಗಿದ್ದು, ಯುವ ಪ್ರತಿಭೆಗಳು ಸಿದ್ದಪಡಿಸಿರುವ ಎರಡು ಮನಸ್ಸುಗಳ ಮನದ ಮಾತುಗಳನ್ನು ನೋಡುಗರ ಮುಂದಿಡಲಿದೆ. ಚಿತ್ರ ತಂಡ ಮೊದಲಿಗೆ ಡಿಆರ್‌ಸಿಗೆ ಹಾಗೂ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಲಿದೆ ಎಂದು ತಿಳಿಸಿದರು. ಇದು ಚಿತ್ರೋತ್ಸವದ ಹಾದಿಯಲ್ಲಿ ಹೊಸ ಪ್ರಯತ್ನ ಮತ್ತು ಪರಿಣಾಮಕಾರಿಯಾಗಲಿದೆ ಎಂಬ ನಿರೀಕ್ಷೆ ಹುಟ್ಟಿಸಿದೆ.
ಮೈಸೂರು ದಸರಾ ಚಲನಚಿತ್ರೋತ್ಸವ ಸೆ.೨೮ರವರೆಗೂ ನಡೆಯಲಿದ್ದು ಸಿನಿಮಾಸಕ್ತರಿಗೆ ಚಿತ್ರೋತ್ಸವ ಸಮಿತಿ ಐನಾಕ್ಸ್ ಗೆ ನೊಂದಣಿ ಅವಕಾಶವನ್ನು ಮಾಡಿಕೊಟ್ಟಿದೆ ಆಸಕ್ತರು ನೊಂದಾಯಿಸಿಕೊಳ್ಳಬಹುದು. (ವರದಿ ಬಿ.ಎಂ)

Leave a Reply

comments

Related Articles

error: