ಮೈಸೂರು

ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳು ಉತ್ತಮ ವ್ಯಕ್ತಿತ್ವ ರೂಪಿಸುತ್ತವೆ: ಡಾ. ಶ್ರೀಧರ್

ಶಿಕ್ಷಣ ಮನುಷ್ಯನನ್ನು ವ್ಯಕ್ತಿಯನ್ನಾಗಿ ಮಾಡಿದರೆ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಉತ್ತಮ ವ್ಯಕ್ತಿತ್ವ ರೂಪಿಸುತ್ತವೆ ಎಂದು ಚಲನಚಿತ್ರ ನಟ ಹಾಗೂ ಅಂತಾರಾಷ್ಟ್ರೀಯ ಭರತನಾಟ್ಯ ಕಲಾವಿದ ಡಾ. ಶ್ರೀಧರ್ ಅಭಿಪ್ರಾಯಪಟ್ಟರು.

ಗುರುವಾರ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಆಯೋಜಿಸಿದ್ದ ಮೂರು ದಿನಗಳ ಅಂತರ ಕಾಲೇಜು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ನಾನು ಇಂದು ಇಷ್ಟೆಲ್ಲವನ್ನು ಸಾಧಿಸಿದ್ದೇನೆ ಎಂದರೆ ಅದಕ್ಕೆ ಪ್ರಮುಖ ಕಾರಣ ಸಾಂಸ್ಕೃತಿಕ ಚಟುವಟಿಕೆಗಳು. ಅವುಗಳ ಒಡನಾಟದಿಂದ ನಾನೋರ್ವ ವ್ಯಕ್ತಿಯಾದೆ. ಕೇವಲ ಶಿಕ್ಷಣದಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುವುದಿಲ್ಲ. ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಕೆಗಳ ಸಮ್ಮಿಳಿತಿಂದ ಅತ್ಯುತ್ತಮ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನಕ್ಕೆ ದೊರೆತಿರುವ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಂಡು ಸಾಧಿಸಿ ತೋರಿಸಿ. ಪ್ರಯೋಗಕ್ಕೆ ಒಡ್ಡಿಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾಲಯ ಕೇವಲ ಮೈಸೂರಿಗಷ್ಟೇ ಅಲ್ಲ ಇಡೀ ದೇಶಕ್ಕೆ ಕೀರ್ತಿಪ್ರಾಯವಾಗಿದೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಹೆಸರು ಕೇಳಿದಾಕ್ಷಣ ಉಂಟಾಗುವ ಅನುಭವ ಮೈಸೂರು ವಿವಿ ಹೆಸರು ಕೇಳಿದಾಗಲೂ ಆಗುತ್ತದೆ. ತನ್ನ ಅನೇಕ ಆಯಾಮ, ವಿಶೇಷತೆಗಳಿಂದ ವಿಶ್ವಮಟ್ಟದಲ್ಲಿ ಹೆಸರು ಗಳಿಸಿದ್ದು ಇಲ್ಲಿ ಅನೇಕಾನೇಕ ಮಹನೀಯರು, ಘನ ವ್ಯಕ್ತಿತ್ವ ಉಳ್ಳವರು ಶಿಕ್ಷಣ ಪಡೆದು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದ್ದಾರೆ. ಅಂತಹ ವಿಶೇಷ, ವಿಶಿಷ್ಟ ವಿಶ್ವವಿದ್ಯಾಲಯ ನಮ್ಮ ಮೈಸೂರಿನಲ್ಲಿದೆ ಎನ್ನುವುದೇ ಹೆಮ್ಮೆಯ ವಿಷಯ ಎಂದರು.

ಕ್ರಿಯಾಶೀಲತೆಗೆ ಒತ್ತು ನೀಡಿ: ಮನುಷ್ಯನ ಮೆದುಳು ಎರಡು ಭಾಗಗಳನ್ನು ಹೊಂದಿರುತ್ತದೆ. ಒಂದು ವಿಶ್ಲೇಷಣಾತ್ಮಕವಾಗಿ ಕಾರ್ಯನಿರ್ವಹಿಸಿದರೆ ಮತ್ತೊಂದು ಕ್ರಿಯಾಶೀಲವಾಗಿ ಚಿಂತಿಸುತ್ತದೆ. ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ರಾಜ ಮಹಾರಾಜರು, ಸೇವಕರು ಎಲ್ಲರಿಗೂ ಮೆದುಳಿನ ಎರಡೂ ಭಾಗಗಳು ಕಾರ್ಯನಿರ್ವಹಿಸುವಂತಹ ಶಿಕ್ಷಣ ನೀಡುತ್ತಿದ್ದರು. ಆದರೆ ಇಂದಿನ ಶಿಕ್ಷಣ ಕೇವಲ ವಿಶ್ಲೇಷಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದು ವಿದ್ಯಾರ್ಥಿಗಳಲ್ಲಿ ಕ್ರೀಯಾಶೀಲತೆಯೇ ಇಲ್ಲದಂತಾಗಿದೆ. ಹಾಗಾಗಿ ಮೆದುಳಿನ ಎರಡೂ ಭಾಗಗಳು ಸಮನಾಗಿ ಕಾರ್ಯನಿರ್ವಹಿಸುವಂತಹ ಕ್ರಿಯಾತ್ಮಕ ಶಿಕ್ಷಣಕ್ಕೆ ಶಾಲಾ ಹಂತದಲ್ಲಿಯೇ ಒತ್ತು ನೀಡಬೇಕು ಎಂದು ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ಗುಣಮಟ್ಟ ಹೆಚ್ಚು: ಬೇರೆಡೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ, ಮೈಸೂರಿನಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ತುಂಬಾ ವ್ಯತ್ಯಾಸವಿದೆ. ಇಲ್ಲಿ ನಡೆಯುವ ಕಾರ್ಯಕ್ರಮಗಳ ಗುಣಮಟ್ಟ ಹೆಚ್ಚಾಗಿರುತ್ತದೆ.  ಹೃದಯವನ್ನು ಅರಳಿಸುವ ಪ್ರಕ್ರಿಯೆ ಕಲೆಯಲ್ಲಿದ್ದು, ಯಾವುದಾದರೂ ಒಂದು ಕಲೆಯನ್ನು ಮೈಗೂಡಿಸಿಕೊಳ್ಳಿ. ಜೀವನ ಸೌಂದರ್ಯವನ್ನು ಆಸ್ವಾದಿಸುವ ಗುಣವನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಕುಲಸಚಿವ ಪ್ರೊ.ಆರ್.ರಾಜಣ್ಣ, ಕಿರುತೆರೆ ಹಾಗೂ ಚಲನಚಿತ್ರ ನಟಿ ವಾಣಿಶ್ರೀ, ವಿದ್ಯಾರ್ಥಿ ಕ್ಷೇಮಪಾಲನಾ ಕಚೇರಿ ನಿರ್ದೇಶಕ ಡಾ.ಎಂ.ರುದ್ರಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: