ಪ್ರಮುಖ ಸುದ್ದಿಮೈಸೂರು

ಗೋಲ್ಡನ್ ಚಾರಿಯಟ್ ನಲ್ಲಿ ಮೈಸೂರಿಗಾಗಮಿಸಿದ ಪ್ರವಾಸಿಗರು : ಆತ್ಮೀಯವಾಗಿ ಬರಮಾಡಿಕೊಂಡರು ಡಿ.ರಂದೀಪ್

ಮೈಸೂರು,ಸೆ.24:- ಮೈಸೂರು ದಸರಾ ಪ್ರಯುಕ್ತ ಆಯೋಜಿಸಲಾದ ಐಷಾರಾಮಿ ಪ್ರವಾಸಿ ರೈಲು ಗೋಲ್ಡನ್ ಚಾರಿಯಟ್ ಭಾನುವಾರ ಮೈಸೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದೆ. ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಹೂವನ್ನು ನೀಡುವ ಮೂಲಕ ನಗರದ ಅಶೋಕಪುರಂ ರೈಲು ನಿಲ್ದಾಣದಲ್ಲಿ ಪ್ರವಾಸಿಗರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಬೆಂಗಳೂರಿನಿಂದ  ಗೋಲ್ಡನ್ ಚಾರಿಯಟ್ ರೈಲು ಮೈಸೂರಿಗೆ ಆಗಮಿಸಿದ್ದು, ಪ್ರವಾಸಿಗರನ್ನು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಬರಮಾಡಿಕೊಳ್ಳಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾತಂಡಗಳು ಪಾಲ್ಗೊಂಡು ಕಲಾಪ್ರದರ್ಶನ ನೀಡುವ ಮೂಲಕ ಪ್ರವಾಸಿಗರನ್ನು ಬರಮಾಡಿಕೊಂಡಿವೆ. ಕಲಾತಂಡಗಳೊಂದಿಗೆ ಪ್ರವಾಸಿಗರು ತಾವೂ ಹೆಜ್ಜೆ ಹಾಕಿ ಸಂಭ್ರಮಿಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಡಿ.ರಂದೀಪ್ ಈ ದಿನ 28 ಮಂದಿ ಪ್ರವಾಸಿಗರು ಬಂದಿದ್ದಾರೆ. ಅವರು ಎರಡು ದಿನ ಮೈಸೂರಿನಲ್ಲಿಯೇ ತಂಗಲಿದ್ದಾರೆ. ಇಲ್ಲಿಗೆ ಆಗಮಿಸಿದ ಪ್ರವಾಸಿಗರು ಪ್ರವಾಸೋದ್ಯಮ ಇಲಾಖೆ ಬಸ್ಸಿನಲ್ಲಿ ಮೈಸೂರಿನ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಿ, ಶ್ರೀರಂಗಪಟ್ಟಣ, ಮಂಡ್ಯ, ಚಾಮರಾಜನಗರಗಳಿಗೆ ಭೇಟಿ ನೀಡಿ ಅಲ್ಲಿನ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಲಿದ್ದಾರೆ. ಅವರಿಗೆ ಗೋಲ್ಡ್ ಕಾರ್ಡ್ ನೀಡಲಾಗಿದೆ. ಸೆಪ್ಟೆಂಬರ್ 30ರಂದು ಗೋಲ್ಡನ್ ಚಾರಿಯಟ್ ನಲ್ಲಿ ಮತ್ತಷ್ಟು ಪ್ರವಾಸಿಗರು ಬರಲಿದ್ದಾರೆ ಎಂದು ತಿಳಿಸಿದರು.  ರೈಲಿನಲ್ಲಿ ಆಗಮಿಸಿದ ಪ್ರವಾಸಿಗರು ಕಲಾತಂಡಗಳ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡು ಬಂತು.

ಸುವರ್ಣ ರಥದಲ್ಲಿ ಮೈಸೂರು ದಸರಾ ಮಹೋತ್ಸವಕ್ಕೆ ಮೊದಲ ಬಾರಿಗೆ ಬಂದ ಬೆಂಗಳೂರು ಪ್ರವಾಸಿ ಎಸ್. ಪುರುಷೋತ್ತಮ್ ಮತ್ತು ಅವರ ಪತ್ನಿ ಸ್ವರ್ಣಗೀತ. ಅಪೂರ್ವ ಪ್ರಯಾಣದ ಅದ್ಭುತ ಕ್ಷಣಗಳನ್ನು ವರ್ಣಿಸಿದರು. ನಾನು ದಸರಾ ಮಹೋತ್ಸಕ್ಕೆ ಮೈಸೂರಿಗೆ ಪತ್ನಿಯನ್ನು ಕರೆದುಕೊಂಡು ಬರಲು ನಿರ್ಧರಿಸಿದ್ದೆ ಆದರೆ ಹೇಳಿರಲಿಲ್ಲ. ನಾವು ಪ್ರವಾಸಕ್ಕೆ ರೈಲಿನಲ್ಲಿ ಹೋಗುತ್ತಿದ್ದೇವೆ ಎಂದಷ್ಟೆ ಹೇಳಿದ್ದೆ. ರಾತ್ರಿ ಯಶವಂತಪುರದಲ್ಲಿ ನನ್ನ ಪತ್ನಿಗೆ ಆಶ್ಚರ್ಯವಾಯಿತು ನಾನು ಅಲ್ಲೆ ಹೇಳಿದ್ದು ನಾವು ಈ ಸುವರ್ಣ ರಥದಲ್ಲಿ ಮೈಸೂರಿಗೆ ದಸರಾ ಮಹೋತ್ಸವಕ್ಕೆ, ಜಗದ್ವಿಖ್ಯಾತ ಅರಮನೆ ನೋಡಲು ಹೋಗುತ್ತಿದ್ದೇವೆ ಎಂದು ಬಹಳ ಖುಷಿ ಪಟ್ಟರು. ಸುವರ್ಣ ರಥದ ಸಿಬ್ಬಂದಿ ಬಹಳ ವಿಜೃಂಭಣೆಯಿಂದ ಬರಮಾಡಿಕೊಂಡರು.ನಾವು ಪ್ರತಿ ಕ್ಷಣವನ್ನು ಎಂಜಾಯ್ ಮಾಡಿದೆವು, ರೈಲಿನೊಳಗಿನ ಆತಿಥ್ಯ ಮನಮೋಹಕ ನಾವು ಥ್ರಿಲ್ ಆಗಿದ್ದೇವೆ” ಎಂದು ಪುರುಷೋತ್ತಮ್ ಹಾಗೂ ಸ್ವರ್ಣಗೀತ ತಮ್ಮ ಅನುಭವ ಹಂಚಿಕೊಂಡರು.

ಹೈದರಾಬಾದ್ ಮೂಲದ ಪ್ರವಾಸಿ ಸತ್ಯನಾರಾಯಣ್ ಅವರು ಸುವರ್ಣ ರಥದ ಈ ವಿಶೇಷ ಟ್ರಿಪ್ ಮರೆಯಲಾಗದ ಅನುಭವ ನೀಡಿದೆ. ಕಡಿಮೆ ವೆಚ್ಚದ ಇದೇ ಮಾದರಿಯ ಒಂದು ದಿನದ ಪ್ರವಾಸಗಳನ್ನು ಇನ್ನಷ್ಟು ಆಯೋಜಿಸಲಿ ಎಂದು ತಿಳಿಸಿದರು.  ಮೈಸೂರು ದಸರಾ, ಬೆಳಕಿನಿಂದ ಮಂತ್ರಮುಗ್ಧಗೊಳಿಸುವ ಅಂಬಾವಿಲಾಸ ಅರಮನೆ ನೋಡಲು ಅಮೇರಿಕಾದಿಂದ ಕುಟುಂಬ ಸಮೇತ ಬಂದಿರುವ ಕಿಶೋರ್ ನೃತ್ಯ ಮಾಡಿ ಸಂಭ್ರಮಿಸಿದರು, ನಾವು ಮೂರು ತಲೆಮಾರುಗಳು ಈ ಪ್ರವಾಸವನ್ನು ಎದುರು ನೋಡುತ್ತಿದ್ದೆವು. ನಮ್ಮ ತಂದೆ 75 ವರ್ಷದ ಸತ್ಯನಾರಾಯಣ್ ಹಾಗೂ ನನ್ನ ಮಗ 7 ವರ್ಷದ ಅರ್ಜುನ್ ನಾವೆಲ್ಲರೂ  ಫೈವ್ ಸ್ಟಾರ್ ಲಕ್ಸುರಿ ಜರ್ನಿ ಮಾಡಿದೆವು. ಮೈಸೂರು ದಸರಾ ಬಗ್ಗೆ ಕೇಳಿದ್ದೆವು, ನೋಡಲೇಬೇಕು ಎಂದು ನಿಶ್ಚಿಯಿಸಿದಾಗ ವೆಬ್ ಸೈಟ್ ಮೂಲಕ ಬುಕ್ ಮಾಡಿ ಪ್ರವಾಸ ಆರಂಭಿಸಿದೆವು ಇದು ಮರೆಯಲಾಗದ ಅವಿಸ್ಮರಣೀಯ ಅನುಭವ ಎಂದು ತಮ್ಮ ಖುಷಿಯನ್ನು ಹಂಚಿಕೊಂಡರು.

ಇದೇ ವೇಳೆ ಜಿಲ್ಲಾಧಿಕಾರಿ ಡಿ.ರಂದೀಪ್ ರೈಲಿನ ರೆಸ್ಟೋರೆಂಟ್ ನಲ್ಲಿ ಲಘು ಉಪಹಾರ ಸೇವಿಸಿದರು. ಈ ಸಂದರ್ಭ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜನಾರ್ದನ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್ ಎಸ್.ಎಚ್)

Leave a Reply

comments

Related Articles

error: