ಕರ್ನಾಟಕ

ಅ.5ರಂದು ವಿಧಾನಸೌಧದ ಎದುರಿನಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ

ಶಿವಮೊಗ್ಗ, ಸೆ.24 : ವಿಧಾನಸೌಧದ ಮುಂಭಾಗ ಅ.5 ರಂದು ಮಹರ್ಷಿ ವಾಲ್ಮೀಕಿಯವರ ಪುತ್ಥಳಿ ಅನಾವರಣ ಹಾಗೂ ಮಹಿರ್ಷಿ ವಾಲ್ಮೀಕಿ ತಪೋವನದ ಉದ್ಘಾಟನೆಯನ್ನು ಏರ್ಪಡಿಸಲಾಗಿದ್ದು, ಜಿಲ್ಲೆಯ ನಾಯಕ ವಾಲ್ಮೀಕಿ ಜನಾಂಗದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಹಕಾರ ಸಚಿವ ರಮೇಶ್ ಜಾರಕಿಹೊಳಿ ಅವರು ಮನವಿ ಮಾಡಿದರು.

ಅವರು ಶನಿವಾರ ಶಿವಮೊಗ್ಗ ಜಿಲ್ಲಾ ವಾಲ್ಮೀಕಿ ನಾಯಕ ಸಂಘ ಜಿಲ್ಲಾ ಘಟಕವು ನಗರದ ಮೈಲಾರೇಶ್ವರ ಸಭಾಂಗಣದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ವಾಲ್ಮೀಕಿ ಜನಾಂಗದ ಸರ್ವಾಂಗೀಣ ವಿಕಾಸಕ್ಕೆ ಅನುಕೂಲವಾಗಬಹುದಾದ ಯೋಜನೆಗಳ ಕುರಿತು ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಲಾಗುವುದು ಎಂದವರು ನುಡಿದರು.

ಈ ಸಂದರ್ಭ ಉಪಸ್ಥಿತರಿದ್ದ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯತಡೆ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಅವರು ಮಾತನಾಡಿ, ಈ ಕಾರ್ಯಕ್ರಮಕ್ಕಾಗಿ ಸರ್ಕಾರ ಒಂದು ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಿದೆ. ವಿಶೇಷವಾಗಿ ನೆರೆಯ ರಾಜ್ಯ ತಮಿಳುನಾಡಿನಲ್ಲಿ 50 ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ರತಿಮೆ 25 ಟನ್ ಭಾರವಿದ್ದು, ಕಪ್ಪುಶಿಲೆಯಿಂದ ಕೂಡಿದ ಸುಂದರ ಮತ್ತು ವಿಶ್ವದ ಅತಿ ಎತ್ತರದ ವಾಲ್ಮೀಕಿ ಪುತ್ಥಳಿ ಇದಾಗಿದೆ ಎಂದವರು ನುಡಿದರು.

ದೇಶದ ವಿವಿಧ ರಾಜ್ಯಗಳಲ್ಲಿ ಸುಮಾರು 8 ಕೋಟಿಗೂ ಅಧಿಕ ವಾಲ್ಮೀಕಿ ಸಮುದಾಯದವರು ಇದ್ದಾರೆ. ವಿಶೇಷವಾಗಿ ರಾಜ್ಯದಲ್ಲಿ 18 ಜನ ವಿಧಾನಸಭಾ ಸದಸ್ಯರು, ಓರ್ವ ವಿಧಾನ ಪರಿಷತ್ ಸದಸ್ಯರು 2 ಲೋಕಸಭಾ ಸದಸ್ಯರು ಸೇರಿದಂತೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಅಸಂಖ್ಯಾತ ಬಂಧುಗಳು ಗುರುತಿಸಲ್ಪಡುತ್ತಿದ್ದಾರೆ.

ಆದರೆ, ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿರುವ ಈ ಸಮಾಜ ಬಾಂಧವರು ನಿರೀಕ್ಷಿತ ಮಟ್ಟದಲ್ಲಿ ಮುಂದುವರೆಯದಿರುವುದು ನೋವಿನ ಸಂಗತಿ ಎಂದ ಅವರು, ಅದಕ್ಕೆ ಸಂಘಟನೆಯಲ್ಲಿನ ತೊಡಕು ಹಾಗೂ ಭಿನ್ನಾಭಿಪ್ರಾಯಗಳು ಕಾರಣವಿರಬಹುದು ಎಂದವರು ನುಡಿದರು.

ಗಾಂಧೀಜಿಯವರಿಗೆ ರಾಮರಾಜ್ಯದ ಪರಿಕಲ್ಪನೆಯನ್ನು ತಂದುಕೊಟ್ಟವರು ವಾಲ್ಮೀಕಿ. ವಾಲ್ಮಿಕಿ ರಚಿತ ರಾಮಾಯಣ ವಿಶ್ವದ ನೂರಕ್ಕೂ ಹೆಚ್ಚಿನ ಭಾಷೆಗಳಿಗೆ ತರ್ಜುಮೆಯಾಗಿದೆ ಎಂಬುದು ಆ ಕೃತಿಗಿರುವ ಮತ್ತು ಕೃತಿಕಾರನ ಮಹತ್ವವನ್ನು ತಿಳಿಯಬಹುದಾಗಿದೆ. ದೇಶದಾದ್ಯಂತ ಕಂಡುಬರುವ ಗುಡಿ-ಗೋಪುರಗಳು, ಕೆರೆ-ಕಟ್ಟೆ-ಕಾಲುವೆಗಳು, ಕೋಟೆ-ಕೊತ್ತಲುಗಳ ನಿರ್ಮಾಣದಲ್ಲಿ ನಾಯಕರು ಪ್ರಮುಖಪಾತ್ರ ವಹಿಸಿದ್ದಾರೆ. ನಾಯಕರು ಈ ದೇಶದ ಮೂಲನಿವಾಸಿಗಳು ಎಂಬುದರಲ್ಲಿ ಎರಡು ಮಾತಿಲ್ಲ ಎಂದ ಅವರು ಭವ್ಯ ಇತಿಹಾಸವಿರುವ ನಾಯಕರಿಗೆ ಸಮಾನತೆ, ಸಮಪಾಲು-ಸಮಬಾಳು, ಸೌಲಭ್ಯಗಳು ದೊರೆಯುವಲ್ಲಿ ಆಶಾದಾಯಕ ಭಾವನೆ ಇಲ್ಲ ಎಂದವರು ನುಡಿದರು.

ವಾಲ್ಮೀಕಿಯ ಜನನ, ಜಾತಿ ಮುಂತಾದ ವಿಷಯಗಳ ಕುರಿತು ವಿದ್ವಾಂಸರಲ್ಲಿ ಜಿಜ್ಞಾಸೆ ಇದೆ. ಇದು ಸರಿಯಲ್ಲ. ವಾಲ್ಮೀಕಿ ನಾಯಕ ಜನಾಂಗದವನಾಗಿದ್ದ ಎಂಬುದಕ್ಕೆ ಯಾವುದೇ ಅನುಮಾನ ಬೇಡ. ವಾಲ್ಮೀಕಿ ಓರ್ವ ಮಾನವತಾವಾಗಿ, ದಾರ್ಶನಿಕ, ಆದರ್ಶವಾಗಿ ಇವೆಲ್ಲಕ್ಕೂ ಮಿಗಿಲಾಗಿ ನಿಜವಾದ ಸಮಾಜ ಸುಧಾರಕ ಎಂದವರು ಬಣ್ಣಿಸಿದರು.

ಸಂಘಟನೆಯಲ್ಲಿ ಶಕ್ತಿಯಿದೆ. ಇದರಲ್ಲಿ ಬಿನ್ನಾಭಿಪ್ರಾಯ ಬೇಡ. ಪಕ್ಷಾತೀತವಾಗಿ ನಡೆಯುವ ಈ ಅಪೂರ್ವ ಹಾಗೂ ವೈಭವದ ಕಾರ್ಯಕ್ರಮಕ್ಕೆ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದವರು ನುಡಿದರು.

ವಾಲ್ಮೀಕಿ ಜನಾಂಗದ ಪ್ರಸನ್ನಾನಂದಪುರಿ ಸ್ವಾಮೀಜಿ ಮತ್ತು ಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆದ ಸಭೆಯಲ್ಲಿ ರಾಯಚೂರು ಸಂಸದ ಬಿ.ವಿ.ನಾಯಕ್, ಶಾಸಕ ಕೆ.ಬಿ.ಪ್ರಸನ್ನಕುಮಾರ್, ಮುಖಂಡ ಹೆಚ್.ಟಿ.ಬಳಿಗಾರ್, ಕು.ತಾರಾ, ಶ್ರೀಮತಿ ಪಲ್ಲವಿ, ಸೀತಾರಾಮ್ ಉಪಸ್ಥಿತರಿದ್ದರು.

(ಎನ್.ಬಿ)

Leave a Reply

comments

Related Articles

error: