ಮೈಸೂರು

ವಾಸ್ತವಿಕ ನೆಲೆಗಟ್ಟಿನ ಚಿತ್ರ ‘ಮೂಢಾಯಣ’

ಭೂಮಿಕಾ ಆರ್ಟ್ಸ್ ಪ್ರೊಡಕ್ಷನ್ ಆಫ್ ಮೋಶನ್ ಪಿಕ್ಚರ್ಸ್ ವತಿಯಿಂದ ಡಾ.ಡಿ.ಎ. ಉಪಾಧ್ಯ ಅವರ ‘ಬಾಳ ಅರ್ಬುದ’ ಎಂಬ ಕಾದಂಬರಿ ಆಧಾರಿತ ‘ಮೂಢಾಯಣ’ ಚಲನಚಿತ್ರವನ್ನು ತೆರೆಕಾಣಿಸುತ್ತಿದ್ದೇವೆ ಎಂದು ಚಿತ್ರ ನಿರ್ದೇಶಕ ಡಾ.ಡಿ.ಎ. ಉಪಾಧ್ಯ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇದು ಮೂಢನಂಬಿಕೆಯ ವಿರುದ್ಧ ಹೋರಾಡುವ ಬಾಲಕನೊಬ್ಬನ ಕಥೆಯಾಗಿದೆ. ಬಾಲಕ ತನ್ನ ಗ್ರಾಮವನ್ನು ಮೂಢನಂಬಿಕೆ ಮುಕ್ತ ಗ್ರಾಮವಾಗಿಸುತ್ತಾನೆ. ತನ್ನ ಊರಿಗೆ ‘ಆದರ್ಶ ಗ್ರಾಮ’ ಎಂಬ ರಾಜ್ಯಪ್ರಶಸ್ತಿಯನ್ನು ದೊರಕಿಸಿಕೊಡುತ್ತಾನೆ. ಬಾಲಕನ ಹೋರಾಟವನ್ನು ಗುರುತಿಸಿ, ಭಾರತ ಸರ್ಕಾರ ರಾಷ್ಟ್ರ ಪ್ರಶಸ್ತಿ ನೀಡುತ್ತದೆ. ಆದರೆ ಬಾಲಕ ರಾ‍ಷ್ಟ್ರ ಪ್ರಶಸ್ತಿಯನ್ನು ತಿರಸ್ಕರಿಸುತ್ತಾನೆ. ಕಾರಣ ತನ್ನ ಗ್ರಾಮವೊಂದು ಮೂಢನಂಬಿಕೆ ಮುಕ್ತವಾದರೆ ಸಾಲದು. ಇಡೀ ದೇಶವೇ ಮೂಢನಂಬಿಕೆ ಮುಕ್ತವಾಗಬೇಕೆಂಬುದು ಬಾಲಕನ ಹೆಬ್ಬಯಕೆಯಾಗಿರುತ್ತದೆ. ಅದಕ್ಕಾಗಿ ಸರ್ಕಾರ ಮೂಢನಂಬಿಕೆಗಳನ್ನು ತಡೆಯುವ ಕಾನೂನು ಜಾರಿಗೆ ತಂದರೆ ಮಾತ್ರ ರಾಷ್ಟ್ರ ಪ್ರಶಸ್ತಿ ಸ್ವೀಕರಿಸುವುದಾಗಿ ಹೇಳುತ್ತಾನೆ. ಆಗ ಸರ್ಕಾರ ಬಾಲಕನ ಬೇಡಿಕೆಗೆ ಮಣಿದು, ಮೂಢನಂಬಿಕೆಗಳನ್ನು ತಡೆಯುವ ಕಾನೂನು ಜಾರಿಗೆ ತರುತ್ತದೆ. ಆಗ ಮತ್ತೆ ಬಾಲಕನನ್ನು ಆಮಂತ್ರಿಸಿ ಅವನಿಗೆ ರಾಷ್ಟ್ರ ಪ್ರಶಸ್ತಿ ನೀಡುತ್ತದೆ ಎಂದು ಚಿತ್ರದ ಸಂದೇಶವನ್ನು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಡ್ಯ ರಮೇಶ್, ಜೂನಿಯರ್ ನರಸಿಂಹರಾಜು ಹಾಜರಿದ್ದರು.

Leave a Reply

comments

Related Articles

error: