ಮೈಸೂರು

ಹಾರಂಗಿಯಿಂದ ತಮಿಳುನಾಡಿಗೆ ನೀರು ಬಿಡಬೇಡಿ: ಅಧಿಕಾರಿಗಳಿಗೆ ಶಾಸಕ ಕೆ.ವೆಂಕಟೇಶ್ ತಾಕೀತು

ಬೈಲಕುಪ್ಪೆ: ಹಾರಂಗಿ ಜಲಾಶಯದಿಂದ ಕಾವೇರಿ ನದಿಗೆ ನೀರು ಬಿಟ್ಟು ರೈತರ ಬಾಯಿಗೆ ಮಣ್ಣು ಹಾಕಲು ಯತ್ನಿಸುತ್ತಿದ್ದಿರಾ? ಎಂದು ಶಾಸಕ ಕೆ.ವೆಂಕಟೇಶ್ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪಟ್ಟಣದಲ್ಲಿರುವ ತಾ.ಪಂ.ಕಛೇರಿ ಆವರಣದಲ್ಲಿ ಗುರುವಾರ ಕರೆಯಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚಂದ್ರಪ್ಪ ರವರನ್ನು ಪ್ರಶ್ನಿಸಿದರು.

ಹಾರಂಗಿ ಜಲಾಶಯದ ಅಚ್ಚುಕಟ್ಟಿಗೆ ಬರುವ ರೈತರ ಜಮೀನಿನಲ್ಲಿ ಬೆಳೆದಿರುವ ಫಸಲಿಗೆ 15 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದ್ದು ನೀರಿನ ಕೊರತೆ ತೀವ್ರವಾಗಿ ಕಾಡುತ್ತಿದೆ. ಇದರ ಮಧ್ಯೆ ಯಾರಿಗೂ ತಿಳಿಯದಂತೆ ಕಾವೇರಿ ನದಿಗೆ ನೀರು ಬಿಟ್ಟು ಹಾರಂಗಿ ಜಲಾಶಯದಿಂದ ನೀರು ಖಾಲಿ ಮಾಡುತ್ತಿದ್ದೀರಿ ಇದು ಸರಿಯೇ ಎಂದು ತರಾಟೆಗೆ ತೆಗೆದುಕೊಂಡರು.

ಮುಖ್ಯಮಂತ್ರಿಗಳಿಂದ ನೀರು ಬಿಡಲು ಆದೇಶ ಬಂದಿದೆ ಎಂದು ಸುಳ್ಳು ಹೇಳುತ್ತಿದ್ದು ನಿಮಗಿಷ್ಟ ಬಂದಂತೆ ನೀರು ಖಾಲಿ ಮಾಡುತ್ತಿರುವುದು ಸರಿಯಲ್ಲ, ಅಂತಹ ಆದೇಶಗಳು ಬಂದಲ್ಲಿ ನಮ್ಮ ಗಮನಕ್ಕೆ ತಂದು ನಿರ್ಧಾರ ಕೈಗೊಳ್ಳಬೇಕು. ಇದಕ್ಕೂ ಮೀರಿ ನೀರನ್ನು ಈ ರೀತಿ ಕಾವೇರಿ ನದಿಗೆ ಬಿಡುವುದಾದರೆ ಜಲಾಶಯದ ಹತ್ತಿರವೇ ಬಂದು ಕೂರಬೇಕಾಗುತ್ತದೆ ಇದಕ್ಕೆ ಅವಕಾಶ ನೀಡಬೇಡಿ ಎಂದು ಎಚ್ಚರಿಕೆ ನೀಡಿದರು.

ಈಗ ಕೇವಲ 5 ಟಿ.ಎಂ.ಸಿ.ಯಷ್ಟೇ ನೀರು ಲಭ್ಯವಿದ್ದು ರೈತರ ಫಸಲಿಗೆ ಮುಂದಿನ ಎರಡು ಹಂತದಲ್ಲಿ ಮಾತ್ರ ನೀರು ಹರಿಸಲು ಸಾಧ್ಯ ಎಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚಂದ್ರಪ್ಪ ತಿಳಿಸಿದರು.

ಜಿಲ್ಲಾಧಿಕಾರಿ ಡಿ.ರಂದೀಪ್ ಮಾತನಾಡಿ, ಮಳೆಯಾಶ್ರಿತ ಪ್ರದೇಶವನ್ನು ಮಾತ್ರ ಬರ ಎಂದು ಘೋಷಿಸಲಾಗಿದ್ದು ಈ ಪ್ರದೇಶದಲ್ಲಿ ಕುಡಿಯುವ ನೀರಿಗೆ  ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಎನ್.ಆರ್.ಐ.ಜಿ. ಯೋಜನೆಡಿಯಲ್ಲಿ ಹಲವಾರು ಜಾಬ್ ಕಾರ್ಡುಗಳು ರದ್ದಾಗಿದ್ದು ಸಂಬಂಧಪಟ್ಟ ದಾಖಲೆಗಳನ್ನು ಹಾಜರುಪಡಿಸಿ ಅವುಗಳನ್ನು ನವೀಕರಿಸಿಕೊಳ್ಳಬೇಕು ಮತ್ತು ನೂತನವಾಗಿ ಜಾಬ್ ಕಾರ್ಡುಗಳನ್ನು ನೊಂದಾಯಿಸಿಕೊಳ್ಳಬೇಕೆಂದು ತಿಳಿಸಿದರು.

ತಾಲೂಕಿನಲ್ಲಿ ಒಟ್ಟು 31 ಗ್ರಾಮಗಳಲ್ಲಿ ಸ್ಮಶಾನ ಗುರುತಿಸಲಾಗಿದ್ದು ಅವುಗಳಿಗೆ ಅಳತೆ ಮಾಡಿಸಿ ಅಗತ್ಯ ಸೌಲಭ್ಯ ಕಲ್ಪಿಸಲು ಸ್ಥಳೀಯ ಕಂದಾಯ ಅಧಿಕಾರಿಗಳು ಮತ್ತು ಪಿಡಿಒ ಗಮನ ಹರಿಸಬೇಕೆಂದು ತಿಳಿಸಿದರು. ಈ ಸಂದರ್ಭ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್, ಜಿ.ಪಂ ಸದಸ್ಯರು, ತಾ.ಪಂ, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Leave a Reply

comments

Related Articles

error: