ಕರ್ನಾಟಕ

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಃಶ್ಚೇತನ : ಪ್ರಮೋದ್ ಮಧ್ವರಾಜ್

ಉಡುಪಿ, ಸೆ.25: ಸ್ಥಗಿತಗೊಂಡಿರುವ ಬ್ರಹ್ಮಾವರದ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪುನಃಶ್ಚೇತನಗೊಳಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಅವರು ಶನಿವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ, ದಕ್ಷಿಣ ಕನ್ನಡ  ಸಹಕಾರಿ ಸಕ್ಕರೆ ಕಾರ್ಖಾನೆ (ನಿ.) ಬ್ರಹ್ಮಾವರ ಇದರ ಪುನಃಶ್ಚೇತನಗೊಳಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸ್ತುತ ಇರುವ ಕಾರ್ಖಾನೆಯ ಕಟ್ಟಡ ಹಾಗೂ ಯಂತ್ರೋಪಕರಣಗಳನ್ನು ಉಳಿಸಿಕೊಂಡು ಪುನರಾರಂಭಿಸುವ ಸಾಧ್ಯತೆ ಕುರಿತು ಹಾಗೂ ಹಳೆಯ ಕಟ್ಟಡದ ಬದಲು ಹೊಸ ಕಟ್ಟಡ ನಿರ್ಮಾಣ, ಆಧುನಿಕ ಯಂತ್ರೋಪಕರಣಗಳ  ಅಳವಡಿಕೆ ಮಾಡುವ ಕುರಿತಂತೆ ತಜ್ಞರ ವರದಿ ಸಿದ್ದಪಡಿಸಿಕೊಂಡು  ಹಾಗೂ ಇವುಗಳಿಗೆ ತಗಲುವ ಹಣಕಾಸಿನ ವೆಚ್ಚದ ಕುರಿತಂತೆ ಚರ್ಚಿಸಲು, ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು ಹಾಗೂ  ಸಕ್ಕರ ಕಾರ್ಖಾನೆಯ ಆಡಳಿತ ಮಂಡಳಿಯ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳುವುದಾಗಿ ಸಚಿವರು ತಿಳಿಸಿದರು.

ಕಾರ್ಖಾನೆ ಪುನಃಶ್ಚೇತನ ಕುರಿತಂತೆ ಶುಗರ್ ಫೆಡರೇಷನ್ ಹಾಗೂ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡುವ ತಜ್ಞರ ನೇತೃತ್ವದಲ್ಲಿ ವಿಸ್ತೃತ ವರದಿ ತಯಾರಿಸಿ ಆ ವರದಿಯನ್ನು ಜಿಲ್ಲಾಧಿಕಾರಿಗಳ ಮೂಲಕ, ಸಕ್ಕರೆ ಇಲಾಖೆಯ ನಿರ್ದೇಶಕರಿಗೆ ಸಲ್ಲಿಸುವಂತೆ  ಕಾರ್ಖಾನೆಯ ಆಡಳಿತ ಮಂಡಳಿ ಸದಸ್ಯರಿಗೆ ಸೂಚಿಸಿದ ಸಚಿವರು, ಕಾರ್ಖಾನೆಯ ಕಬ್ಬು ಅರೆಯುವ ಸಾಮರ್ಥ್ಯವನ್ನು ಪ್ರತಿ ದಿನಕ್ಕೆ 1500 ಮೆ.ಟನ್ ಗೆ ಹೆಚ್ಚಿಸಲು ಕ್ರಮ ಕೈಗೊಳ್ಳಿ, ಕಾರ್ಖಾನೆಯಲ್ಲಿ ಹಳೆಯ ಉಪಯೋಗಕ್ಕೆ ಬಾರದ ಉಪಕರಣಗಳನ್ನು ಹರಾಜು ಮೂಲಕ ವಿಲೇವಾರಿ ಮಾಡಿ ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರು ಮಾತನಾಡಿ, ವಾರಾಹಿ ಯೋಜನೆಯ ಪ್ರಯೋಜನ ದೊರೆಯದ ಸಮಯದಲ್ಲಿಯೇ ಕಾರ್ಖಾನೆ ನಡೆದಿದೆ, ಈಗ ವರಾಹಿ ನೀರಿನ ಪ್ರಯೋಜನ ದೊರೆಯುತ್ತಿರುವುದರಿಂದ ಕಬ್ಬು ಬೆಳೆಯಲು ಸಾಧ್ಯವಿದೆ. ಪ್ರಸ್ತುತ ವಾರಾಹಿ ಯೋಜನೆಯಿಂದ 3800 ಎಕ್ರೆಗೆ ನೀರಾವರಿ ಸೌಲಭ್ಯ ದೊರೆತಿದೆ. ಕಾರ್ಖಾನೆ ಪುನಃಶ್ಚೇತನಕ್ಕೆ ಹಣದ ಅವಶ್ಯತೆಗಾಗಿ ಕಾರ್ಖಾನೆಯ 25 ಎಕರೆ ಪ್ರದೇಶವನ್ನು ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಮಾರಾಟ ಆದಾಯ ಕ್ರೂಡೀಕರಣ ಮಾಡಬಹುದು. ಸಕ್ಕರೆ ಕಾರ್ಖಾನೆಯನ್ನು ವರ್ಷದಲ್ಲಿ 10 ತಿಂಗಳು ಕಾರ್ಯ ನಿರ್ವಹಿಸುವ ಯೋಜನೆ ರೂಪಿಸಿ, ನೀರಾವರಿ ಸೌಲಭ್ಯ ಇರುವ ಕಾರಣ ರೈತರು ವರ್ಷಪೂರ್ತಿ ಕಬ್ಬು ಬೆಳೆಯಲು ಸಾಧ್ಯ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ ಚಂದ್ರ ಶೆಟ್ಟಿ ಮಾತನಾಡಿ, 2800 ರೈತರು ಈಗಾಗಲೇ ಕಬ್ಬು ಬೆಳದು ಕಾರ್ಖಾನೆಗೆ ಪೂರೈಸುವುದಾಗಿ ಒಪ್ಪಿಗೆ ಪತ್ರ ನೀಡಿದ್ದಾರೆ, ಕಾರ್ಖಾನೆಯೊಂದಿಗೆ ರೈತರು ಹೊಂದಿರುವ ಭಾವನೆಗಳನ್ನು ತಿಳಿದುಕೊಳ್ಳಬೇಕು, ಕಾರ್ಖಾನೆಯ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಕಬ್ಬು ಬೆಳೆಯುವ ರೈತರಿಗೆ ಸಕಾಲದಲ್ಲಿ ಹಣ ಪೂರೈಸುವ ವ್ಯವಸ್ಥೆ ಆಗಬೇಕು ಎಂದು ಹೇಳಿದರು.

ಭಾರತೀಯ ಕಿಸಾನ ಸಂಘದ ಸತ್ಯ ನಾರಾಯಣ ಉಡುಪ ಮಾತನಾಡಿ, ಭತ್ತದ ಬೆಳೆಗಿಂತ ಅರ್ಧದಷ್ಟು ನೀರಿನಲ್ಲಿ ಕಬ್ಬು ಬೆಳೆಯಬಹುದಾಗಿದೆ. ಸಕ್ಕರೆ ಕಾರ್ಖಾನೆ ನಡೆಯಲು ಅಗತ್ಯವಿರುವಷ್ಠು ಕಬ್ಬು ಜಿಲ್ಲೆಯ ರೈತರು ಬೆಳೆದೇ ಬೆಳೆಯುತ್ತಾರೆ. ಕಾರ್ಖಾನೆ ಇದ್ದಲ್ಲಿ ಕಬ್ಬು ಬೆಳೆಗಾರರು ನಷ್ಟ ಅನುಭವಿಸಲು ಸಾಧ್ಯವೇ ಇಲ್ಲ ಎಂದು ಹೇಳಿದರು.

ಭಾರತೀಯ ಕಿಸಾನ್ ಘಟಕದ ಅಧ್ಯಕ್ಷರು ಮಾತನಾಡಿ, ಸರ್ಕಾರ ಕಬ್ಬಿಗೆ ಕನಿಷ್ಠ 3000 ರೂ.ಬೆಂಬಲ ಬೆಲೆ ಘೋಷಣೆ ಮಾಡಿ, ಕಬ್ಬು ಲಾಭದಾಯಕ ಎಂಬ ಭಾವನೆಯನ್ನು ರೈತರಲ್ಲಿ ಮೂಡಿಸಬೇಕು, ಜಿಲ್ಲೆಯ ಹಡಿಲು ಬಿದ್ದಿರುವ ಗದ್ದೆಗಳಲ್ಲೂ ಕಬ್ಬು ಬೆಳೆಯಲು ರೈತರು ಸಿದ್ಧರಿದ್ದಾರೆ ಎಂದರು.

ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಜಯಶೀಲ ಶೆಟ್ಟಿ ಮಾತನಾಡಿ, ವಾರಾಹಿ ಯೋಜನೆಯ ಹಿನ್ನಡೆಯಿಂದಾಗಿ ಕಾರ್ಖಾನೆ ಸ್ಥಗಿತಗೊಂಡಿದ್ದು, ಪ್ರಸ್ತುತ ವಾರಾಹಿ ಯೋಜನೆಯ ನೀರಾವರಿ ಸೌಲಭ್ಯ ದೊರೆಯುತ್ತಿದ್ದು ಕಬ್ಬು ಬೆಳೆಯಲು ಸಾಧ್ಯವಿದೆ, ಸರ್ಕಾರದ ಅರ್ಥಿಕ ನೆರವು ನೀಡಿದರೆ ಕಾರ್ಖಾನೆ ಪ್ರಾರಂಭಿಸಲು ಸಾಧ್ಯವಿದೆ. ಕಾರ್ಖಾನೆಯ ಪುನಃಶ್ಚೇತನಕ್ಕೆ 24 ಕೋಟಿಯ ಅಂದಾಜು ವರದಿ ಹಾಗೂ ವಿಸ್ತರಣೆಗಾಗಿ 60 ಕೋಟಿ ಮೊತ್ತದ ಅಂದಾಜು ವರದಿಯನ್ನು ತಜ್ಞರಿಂದ ಸಿದ್ಧಪಡಿಸಿದೆ, ಕಾರ್ಖಾನೆಯನ್ನು ಪುನಃಶ್ಚೇತನಗೊಳಿಸುವ ಕುರಿತಂತೆ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಆಯುಕ್ತರು ವರದಿಯನ್ನು ನೀಡಿದ್ದು, ಕೃಷಿ ಇಲಾಖೆಯಿಂದಲೂ ಸಹ ಸೂಕ್ತ ಆಭಿಪ್ರಾಯ ವ್ಯಕ್ತವಾಗಿದೆ ಎಂದು ತಿಳಿಸಿದರು.

ಈ ಹಿಂದೆ ಸಕ್ಕರೆ ಕಾರ್ಖಾನೆಯ ಜಾಗದಲ್ಲಿ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ನಿರ್ಮಾಣಕ್ಕೆ ಬಳಸಲು ಮಾತ್ರ ಚಿಂತಿಸಿದ್ದು, ರೈತರ ಅಭಿವೃದ್ದಿಗಾಗಿ ನೀಡಿರುವ ಈ ಪ್ರದೇಶವನ್ನು ಕೈಗಾರಿಕಾ ಇಲಾಖೆಗ ನೀಡುವ ಯಾವುದೇ ಉದ್ದೇಶ ಇಲ್ಲ ಎಂದು ಸಚಿವ ಪ್ರಮೋದ್ ಮಧ್ವರಾಜ್ ಸ್ಪಷ್ಟಪಡಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫರ್ನಾಂಡಿಸ್, ಜಿಲ್ಲಾ ಪಂಚಾಯತ್ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ಸಹಕಾರ ಇಲಾಖೆಯ ಉಪ ನಿಬಂಧಕ ಪ್ರವೀಣ್ ನಾಯಕ್, ವಾರಾಹಿ ಮುಖ್ಯ ಇಂಜಿನಿಯರ್ ಪದ್ಮನಾಭ, ಬೋಸ್ಲಂ ಫರ್ನಾಂಡಿಸ್, ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಕಾರ್ಖಾನೆಯ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

(ಎನ್.ಬಿ)

Leave a Reply

comments

Related Articles

error: