ಮೈಸೂರು

ಸಂಚಾರ ನಿಯಮ ಉಲ್ಲಂಘಿಸಿದರೆ ದಂಡ ಗ್ಯಾರಂಟಿ: ಮೈಸೂರು ಜಿಲ್ಲಾ ಪೊಲೀಸ್ ಎಚ್ಚರಿಕೆ

ಜಿಲ್ಲೆಯಲ್ಲಿ ಸಂಚರಿಸುವ ವಾಹನ ಚಾಲಕರು ಸಂಚಾರಿ ನಿಯಮಗಳನ್ನು ಪಾಲಿಸದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ಜಿಲ್ಲಾ ಪೋಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ನೇಮಕವಾಗಿರುವ ರವಿ ಡಿ. ಚನ್ನಣ್ಣನವರು ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಲು ಮತ್ತು ಸಂಚಾರಿ ನಿಯಮಗಳನ್ನು ಪಾಲಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಸಂಚಾರ ನಿಯಮಗಳನ್ನು ತಪ್ಪದೆ ಪಾಲಿಸಿ ಹಾಗೂ ಪಾಲಿಸಲು ಪ್ರೇರೇಪಣೆ ನೀಡಿ ಎಂಬುದು ಜಿಲ್ಲಾ ಪೊಲೀಸರು ಎಲ್ಲ ವಾಹನ ಚಾಲಕರಲ್ಲಿ ಮನವಿ ಮಾಡಿದ್ದು, ಸಂಚಾರಿ ನಿಯಮಗಳನ್ನು ಪಾಲಿಸದಿದ್ದರೆ ದಂಡ ವಿಧಿಸಲಾಗುವುದು. ದಂಡ ವಿಧಿಸುವುದಷ್ಟೇ ನಮ್ಮ ಉದ್ದೇಶವಲ್ಲ, ನಿಮ್ಮ ಜೀವ ರಕ್ಷಣೆಯೇ  ನಮ್ಮ ಧ್ಯೇಯ ಎಂಬುದು ಪೊಲೀಸರ ಕಿವಿಮಾತು.

ಸಂಚಾರಿ ನಿಯಮಗಳು ಏನು ಹೇಳುತ್ತವೆ?

 1. ವಾಹನ ಸವಾರನು ರಸ್ತೆಯ ಎಡಭಾಗದಲ್ಲಿ ಚಲಿಸುತ್ತಾ ತನ್ನ ಬಲಭಾಗದಲ್ಲಿ ಬೇರೆ ವಾಹನಗಳು ಮುಂದೆ ಚಲಿಸಲು ಅವಕಾಶ ಮಾಡಿಕೊಡುವುದು.
 2. ವಾಹನ ಸವಾರನು ಎಡ ತಿರುವು ತೆಗೆದುಕೊಳ್ಳುವಾಗ ತಾನು ಚಲಿಸುವ ರಸ್ತೆಯ ಎಡ ತುದಿಗೆ ಬಂದು ತಾನು ಹೋಗುವ ರಸ್ತೆಗೆ ಸೇರುವುದು ಹಾಗೂ ಬಲ ತಿರುವು ತೆಗೆದುಕೊಳ್ಳುವಾಗ ತಾನು ಚಲಿಸುವ ರಸ್ತೆಯ ಮಧ್ಯಭಾಗಕ್ಕೆ ಬಂದು ಸೂಚನೆ ನೀಡಿ ತಾನು ಹೋಗಬೇಕಿರುವ ರಸ್ತೆಯ ಎಡತುದಿ ತಲುಪಿ ಚಲಿಸುವುದು.
 3. ಅಗ್ನಿಶಾಮಕ ವಾಹನ ಮತ್ತು ಆಂಬುಲೆನ್ಸ್ ವಾಹನಕ್ಕೆ ಮುಂದೆ ಹೋಗಲು ದಾರಿ ಕೊಡುವುದು.
 4. ವಾಹನ ಚಾಲಕನು ಮತ್ತೊಂದು ವಾಹನವು ತನ್ನನ್ನು ಹಿಂದಕ್ಕೆ ಹಾಕಿ ಮುಂದಕ್ಕೆ ಹೋಗುವಾಗ ತನ್ನ ವಾಹನದ ವೇಗವನ್ನು ಹೆಚ್ಚಿಸಬಾರದು ಹಾಗೂ ಆ ವಾಹನವು ಮುಂದೆ ಸಾಗದಂತೆ ಅಡ್ಡಿಪಡಿಸಬಾರದು‌.
 5. ವಾಹನ ಚಾಲಕನು ತಾನು ಚಲಿಸುವ ರಸ್ತೆಗೆ ಅಡ್ಡಲಾಗಿ ಬರುವ ಸ್ಥಳವನ್ನು ಅಥವಾ ರಸ್ತೆಗಳು ಸಂಧಿಸುವ ಜಾಗವನ್ನು ಸಮೀಪಿಸುವಾಗ ವಾಹನದ ವೇಗವನ್ನು ಕಡಿಮೆ ಮಾಡುವುದು‌.
 6. ಚಾಲಕನು ಮೆರವಣಿಗೆ, ಪ್ರತಿಭಟನೆ ಅಥವಾ ರಸ್ತೆ ದುರಸ್ತಿ ನಡೆಯುತ್ತಿರುವ ಜಾಗದಲ್ಲಿ ಗಂಟೆಗೆ 25 ಕಿ.ಮೀ. ಗಿಂತ ಹೆಚ್ಚಿನ ವೇಗದಲ್ಲಿ ಚಲಿಸಬಾರದು.
 7. ವಾಹನದ ವೇಗವನ್ನು ಕಡಿಮೆ ಮಾಡುವಾಗ ಚಾಲಕನು ಅಂಗೈಯನ್ನು ಹಿಂದೆ ಬರುವ ವಾಹನ ಚಾಲಕನಿಗೆ ಕಾಣಿಸುವಂತೆ ಹಲವು ಬಾರಿ ಮೇಲಕ್ಕೂ ಕೆಳಕ್ಕೂ ಆಡಿಸತಕ್ಕದ್ದು.
 8. ಸಾರ್ವಜನಿಕ ವಾಹನಗಳಲ್ಲಿ ಸ್ಫೋಟಕ ವಸ್ತುಗಳನ್ನು ಸಾಗಿಸಲು ಅವಕಾಶ ಮಾಡಿಕೊಡಬಾರದು.
 9. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು.
 10. ವಾಹನ ಚಾಲನೆ ಮಾಡುವಾಗ ವಾಹನಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಹೊಂದಿರಬೇಕು ಹಾಗೂ ಪೋಲೀಸ್ ಅಥವಾ ಸಾರಿಗೆ ಅಧಿಕಾರಿಗಳು ತಪಾಸಣೆ ನಡೆಸುವಾಗ ತೋರಿಸಬೇಕು.
 11. ಚಾಲಕನು ವಾಹನದ ಅಗತ್ಯ ಪ್ರಮಾಣಕ್ಕಿಂತ ಹೆಚ್ಚಿನ ಭಾರ ಅಥವಾ ಜನರನ್ನು ಹೊಂದಿರಬಾರದು.
 12. ಚಾಲಕನು ಆಸ್ಪತ್ರೆ, ಶಾಲೆಗಳ ಮುಂದೆ ಹಾದು ಹೋಗುವಾಗ ಅಲ್ಲಿ ಅಳವಡಿಸಿದ ವೇಗದ ಮಿತಿಗೆ ತಕ್ಕಂತೆ ವಾಹನ ಚಲಾಯಿಸುವುದು ಹಾಗೂ ಶಬ್ದ ಮಾಡಬಾರದು.
 13. ಪಾದಚಾರಿಗಳಿಗೆ ಮೀಸಲಾದ ಕಾಲುದಾರಿಯಲ್ಲಿ ವಾಹನ ಚಲಾಯಿಸಬಾರದು.
 14. ನಿಷೇಧ ಮಾರ್ಗದಲ್ಲಿ ವಾಹನ ಚಲಾಯಿಸಬಾರದು.
 15. ವಾಹನ ಚಲಾಯಿಸುವಾಗ ವಾಹನಗಳ ನಡುವೆ ನಿಗದಿತ ಅಂತರವನ್ನು ಕಾಯ್ದುಕೊಳ್ಳಬೇಕು.
 16. ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಉಪಯೋಗಿಸಬಾರದು.
 17. ದ್ವಿಚಕ್ರ ವಾಹನಗಳ ಸವಾರರು ಕಡ್ಡಾಯವಾಗಿ ಶಿರಸ್ತ್ರಾಣವನ್ನು ಧರಿಸಲೇಬೇಕು.
 18. ವಾಹನ ಪರವಾನಗಿ ಇಲ್ಲದೆ ವಾಹನ ಚಲಾಯಿಸಬಾರದು ಹಾಗೂ ಪರವಾನಗಿ ಇಲ್ಲದ ವ್ಯಕ್ತಿಗಳಿಗೆ ವಾಹನ ಚಲಾಯಿಸಲು ವಾಹನವನ್ನು ನೀಡುವುದೂ ಸಹ ಕಾನೂನಿನ ರೀತ್ಯ ಅಪರಾಧವಾಗಿರುತ್ತದೆ.
 19. ಕಾರಿನಲ್ಲಿ ಸಂಚರಿಸುವಾಗ ಚಾಲಕ ಹಾಗೂ ಪ್ರಯಾಣಿಸುವ ಇನ್ನಿತರ ಪ್ರಯಾಣಿಕರೂ ಸಹ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ.
 20. ವಾಹನವನ್ನು ಎಲ್ಲೆಂದರಲ್ಲಿ ನಿಲ್ಲಿಸದೆ ಸೂಚಿಸಿದ ಸ್ಥಳದಲ್ಲೇ ನಿಲ್ಲಿಸುವುದು.

Leave a Reply

comments

Related Articles

error: