ಮೈಸೂರು

ಬೆಳಗಾವಿ ಅಧಿವೇಶನ ರೈತರಿಗಾಗಿ ಮೀಸಲಿಡಿ : ಸಾಹಿತಿ ದೇವನೂರು ಮಹಾದೇವ ಮನವಿ

ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನವನ್ನು ರಾಜ್ಯವನ್ನಾವರಿಸಿರುವ ಬರ, ರೈತರನ್ನು ಕಾಡುತ್ತಿರುವ  ಬೆಳೆಹಾನಿ, ಮೇವಿನ ಕೊರತೆ, ಕುಡಿಯುವ ನೀರಿನ ಸಮಸ್ಯೆ ಹಾಗೂ ರೈತರಿಗೆ ನೀಡಬೇಕಾದ ಪರಿಹಾರದ ಬಗ್ಗೆ ಚರ್ಚಿಸಲು ಮೀಸಲಿಡುವಂತೆ ಮಹಾಮೈತ್ರಿ ಒಕ್ಕೂಟದಿಂದ ಶಾಸಕರಿಗೆ ಮನವಿ ಸಲ್ಲಿಸಿದೆ.

ಸಾಹಿತಿ ದೇವನೂರು ಮಹದೇವ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಆಪ್ತ ಸಹಾಯಕರ ಮೂಲಕ ಸಿಎಂ ಸಿದ್ಧರಾಮಯ್ಯನವರಿಗೆ ರೈತ ಪರವಾದ ವಿಶೇಷ ಅಧಿವೇಶನಕ್ಕಾಗಿ 120ಕ್ಕೂ ಹೆಚ್ಚು ಶಾಸಕರಿಗೆ ಮನವಿ ಸಲ್ಲಿಸಲಾಯಿತು.

ಗುರುವಾರ ಮೈಸೂರು ಜಿಲ್ಲಾ ಪಂಚಾಯಿತಿ ಕಚೇರಿಗೆ ಬೆಂಬಲಿಗರೊಂದಿಗೆ ತೆರಳಿದ ದೇವನೂರು ಮಹಾದೇವ ಮನವಿ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ರಾಜ್ಯದ 110 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಇನ್ನೂ 29 ತಾಲೂಕುಗಳ ಸೇರ್ಪಡೆಗೆ ತಯಾರಿ ನಡೆದಿದೆ. 12 ಸಾವಿರ ಕೋಟಿ ಬೆಳೆ ನಷ್ಟವುಂಟಾಗಿದೆ. ಆದರೆ ಕೇಂದ್ರವನ್ನು ಕೇವಲ 3337 ಕೋಟಿ ರೂ. ನೆರವು ನೀಡುವಂತೆ ರಾಜ್ಯ ಸರ್ಕಾರ  ಕೋರಿದೆ.  ಇದರಿಂದಾಗಿ ರಾಜ್ಯಕ್ಕೆ ಭೇಟಿ ನೀಡಲಿರುವ ಕೇಂದ್ರ ತಂಡಗಳು ಇನ್ನೂ ಕಡಿಮೆ ನೆರವಿಗೆ ಶಿಫಾರಸ್ಸು ಮಾಡಲಿವೆ., ಶಿಫಾರಸ್ಸು ಮಾಡಿದ ಹಣಕ್ಕಿಂತ ಕಡಿಮೆ ಹಣವನ್ನು ಕೇಂದ್ರ ಬಿಡುಗಡೆ ಮಾಡುವ ಮೂಲಕ ಬೆಳೆ ಹಾನಿಗೆ ಒಳಗಾಗಿರುವ ರೈತರಿಗೆ ಸರಿಯಾದ ರೀತಿಯಲ್ಲಿ ನ್ಯಾಯ ದೊರಕಲು ಸಾಧ್ಯವಿಲ್ಲ.  ಬರಗಾಲದಲ್ಲಿ ಸರ್ಕಾರ ನೀಡುವ ಹಣ ಬೆಳೆನಷ್ಟ ಪರಿಹಾರವಲ್ಲ, ಬದಲಿಗೆ ಒಳಸುರಿ ಸಬ್ಸಿಡಿ ರೂಪದ ನೆರವು ಮಾತ್ರ ಎಂದು ಸರ್ಕಾರಗಳು ಹೇಳುತ್ತಲೇ ಬಂದಿವೆ. ಇದು ರೈತರ, ಗ್ರಾಮೀಣರ ಸಂಕಷ್ಟದ ಸ್ಥಿತಿಯನ್ನು ಸಂಪೂರ್ಣ ಅವಗಣನೆ ಮಾಡುವುದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದ ಭೀಕರ ಬರ ಪರಿಸ್ಥಿತಿಯನ್ನು ಅರ್ಥೈಸಿಕೊಳ್ಳುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡು ವಿಫಲವಾಗಿವೆ. ಆದ್ದರಿಂದ ಕೂಡಲೇ ವಿಶೇಷ ಅಧಿವೇಶನ ನಡೆಸಿ ರಾಜ್ಯದ ರೈತರ ವಸ್ತುಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಎರಡೂ ಸರ್ಕಾರಗಳು ದೃಢ ನಿರ್ಧಾರ ಕೈಗೊಳ್ಳಬೇಕೇಂದು ಮನವಿ ಮಾಡಿದರು. ರಾಜ್ಯದೆಲ್ಲೆಡೆ ಗ್ರಾಮವಾಸಿಗಳು ಜನಾಂದೋಲನಗಳ ಮಹಾಮೈತ್ರಿ ಮತ್ತು ಹಲವು ಸಂಘಟನೆಗಳ ನೇತೃತ್ವದಲ್ಲಿ ಶಾಸಕರಿಗೆ ಮನವಿ ಪತ್ರ ಸಲ್ಲಿಸಲಾಗುತ್ತಿದೆ. ಸರ್ಕಾರದಿಂದ ಹೆಚ್ಚಿನ ನಿರೀಕ್ಷೆಯಿದ್ದು ಇದಕ್ಕೆ ಎಲ್ಲಾ ಜನ ಪ್ರತಿನಿಧಿಗಳು ಪಕ್ಷಭೇದ ಮರೆತು ರೈತರಪರವಾಗಿ ನಿಲ್ಲಬೇಕಿದೆ ಎಂದರು.

ಮಹಾಮೈತ್ರಿ ಒಕ್ಕೂಟದ ಹೊಸಕೋಟೆ ಬಸವರಾಜು, ಶಂಭುಲಿಂಗಸ್ವಾಮಿ, ಸರಗೂರು ನಟರಾಜು, ಕರುಣಾಕರ್, ಒಡನಾಡಿ ಕವಿತಾ, ಮರಂಕಯ್ಯ ಸೇರಿದಂತೆ ಮೊದಲಾದವರು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿದರು.

Leave a Reply

comments

Related Articles

error: