ಮೈಸೂರು

ಮೈಸೂರಿಗರನ್ನು ಬೆಚ್ಚಿ ಬೀಳಿಸಿದ ಮಕ್ಕಳ ಮಾರಾಟ ಜಾಲ : ವೈದ್ಯೆ ಸೇರಿದಂತೆ ನಾಲ್ವರು ವಶಕ್ಕೆ

ಸಾಂಸ್ಕೃತಿಕ ನಗರಿ ಮೈಸೂರು ಶಾಂತತೆಗೆ ಹೆಸರಾಗಿತ್ತು. ಇಲ್ಲಿ ಯಾವುದೇ ಅಹಿತಕರ ಘಟನೆಗಳಿಗೂ ಆಸ್ಪದವಿರಲಿಲ್ಲ. ಆದರೆ ಇತ್ತೀಚೆಗೆ ನಗರದಲ್ಲಿ ಕೊಲೆ-ಕಳ್ಳತನಗಳು ಹೆಚ್ಚುತ್ತಿದ್ದು ಇಲ್ಲಿನ  ಜನರನ್ನು ಆತಂಕಕ್ಕೀಡು ಮಾಡಿದೆ. ಆದರೆ ಇದೀಗ ಏನೂ ಅರಿಯದ ಮುಗ್ಧ ಕಂದಮ್ಮಗಳನ್ನು ಶ್ರೀಮಂತರಿಗೆ ಮಾರಾಟ ಮಾಡುವ ತಂಡವೊಂದು ಸಕ್ರೀಯವಾಗಿರುವ ವಿಷಯ ಇಲ್ಲಿನ ಜನತೆಯನ್ನು ಬೆಚ್ಚಿ ಬೀಳಿಸಿದೆ.

ಮೈಸೂರಿನ ದಕ್ಷಿಣ ಕಾಶಿ ಎಂದೇ ಜನಪ್ರಿಯತೆ ಪಡೆದಿರುವ ನಂಜನಗೂಡಿನಲ್ಲಿ ಕಳೆದ ಮೂರು ತಿಂಗಳಿನಿಂದ 18ಕ್ಕೂ ಅಧಿಕ ಮಕ್ಕಳನ್ನು ಮಾರಾಟ ಮಾಡಲಾಗಿದ್ದು ಕೃತ್ಯಕ್ಕೆ ಸಂಬಂಧಿಸಿದಂತೆ ಮೈಸೂರಿನ ವೈದ್ಯೆ ಮತ್ತು ಅವರಿಗೆ ಸಹಕರಿಸಿದ ನಾಲ್ಕು ಮಂದಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಮಂಡಿಮೊಹಲ್ಲಾ ಖಾಸಗಿ ನರ್ಸಿಂಗ್ ಹೋಂನಲ್ಲಿ ಅರೆಕಾಲಿಕ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಉಷಾ ಪ್ರಕರಣದ ಮುಖ್ಯ ಆರೋಪಿಯಾಗಿದ್ದು, ಶ್ರೀಮಂತರಿಗೆ ಮಕ್ಕಳನ್ನು ಮಾರಾಟ ಮಾಡಲು ಬಡ, ನಿರ್ಗತಿಕ, ಭಿಕ್ಷುಕ ಕುಟುಂಬಗಳನ್ನೇ ಗುರಿಯಾಗಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಆ ಕುಟುಂಬದ ಜೊತೆ ಮಕ್ಕಳ ಮಾರಾಟದ ಮಾತುಕತೆಗೆ ಮುಂದಾಗುತ್ತಿದ್ದು, ಮಾರಾಟ ಮಾಡಲು ಒಪ್ಪದಿದ್ದಾಗ ಅವರು ಭಿಕ್ಷೆ ಬೇಡುವ ಸಮಯವನ್ನೇ ಕಾಯುತ್ತ ಕುಳಿತು ಅವರಿಗೆ ತಿಂಡಿ, ಹಣದ ಆಸೆ ತೋರಿಸಿ ಪುಸಲಾಯಿಸಿ ಕರೆದುಕೊಂಡು ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.

ಇದೇ ರೀತಿ ಕಳೆದ ಮೂರು ತಿಂಗಳ ಹಿಂದೆ ನಂಜನಗೂಡಿನ ಶ್ರೀಕಂಠೇಶ್ವರ ದೇವಳದ ಬಳಿ ಭಿಕ್ಷೆ ಬೇಡುತ್ತಿದ್ದ ಮಗುವನ್ನು ಅಪಹರಣ ಮಾಡುವ ವೇಳೆ ಕೆಲವು ಯುವಕರು ಗಮನಿಸಿ ಅವರ ಬೆನ್ನು ಬಿದ್ದಿದ್ದರು. ಆದರೆ ಆ ವೇಳೆ  ಯುವಕರ ಕಣ್ಣಿಂದ ಅವರು ಹೇಗೋ ತಪ್ಪಿಸಿಕೊಂಡಿದ್ದರು. ಯುವಕರು ಪೊಲೀಸ್ ಠಾಣೆಗೆ ಈ ಕುರಿತು ದೂರು ದಾಖಲಿಸಿದ್ದರು ಎನ್ನಲಾಗಿದೆ.

ದೂರನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡಿಮೊಹಲ್ಲಾದ ಓರ್ವ ವೈದ್ಯೆ ಸೇರಿದಂತೆ ನಾಲ್ವರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ನಂಜನಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: