ಕರ್ನಾಟಕಪ್ರಮುಖ ಸುದ್ದಿಮೈಸೂರು

ಟಿಪ್ಪು ಜಯಂತಿ ಮುಖ್ಯಕಾರ್ಯದರ್ಶಿ–ರಾಜ್ಯ ಸರ್ಕಾರದ ವಿವೇಚನೆಗೆ: ಹೈಕೋರ್ಟ್‍ ನಿರ್ದೇಶನ

ಬೆಂಗಳೂರು: ಟಿಪ್ಪು ಜಯಂತಿ ಆಚರಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿ ಸೂಕ್ತ ಜವಾಬ್ದಾರಿ ನಿರ್ವಹಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಟಿಪ್ಪು ಜಯಂತಿ ಆಚರಣೆಗೆ ತಡೆ ಕೊರಿ ಕೆ.ಪಿ. ಮಂಜುನಾಥ್‍ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುರುವಾರ, ಮುಖ್ಯ ನ್ಯಾಯಮೂರ್ತಿ ಎಸ್‌.ಕೆ. ಮುಖರ್ಜಿ ಹಾಗೂ ನ್ಯಾಯಮೂರ್ತಿ ಆರ್‌.ಬಿ. ಬೂದಿಹಾಳ್‌ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ವಿಲೇವಾರಿ ಮಾಡಿದ್ದು, ಕುರಿತಂತೆ ಅರ್ಜಿದಾರರು ನ.4 ರಂದು ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಬೇಕು. ಮುಖ್ಯ ಕಾರ್ಯದರ್ಶಿಯವರು ಅರ್ಜಿದಾರರ ಅಹವಾಲು ಆಲಿಸಿ, ಇದೇ ನ. 8 ರೊಳಗೆ ಸೂಕ್ತ ಕ್ರಮಕೈಗೊಳ್ಳುವಂತೆ ಆದೇಶ ನೀಡಿದೆ.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಸಜನ್‌ ಪೂವಯ್ಯ ಅವರು, ಟಿಪ್ಪು ಜಯಂತಿ ಆಚರಣೆಗೆ ಸಚಿವ ಸಂಪುಟದ ಒಪ್ಪಿಗೆ ದೊರೆತಿಲ್ಲ. ಇದೊಂದು ರಾಜಕೀಯ ಪ್ರೇರಿತ ಕಾರ್ಯಕ್ರಮ. ಸುಖಾಸುಮ್ಮನೆ ಬೊಕ್ಕಸದ ಹಣ  ಖರ್ಚು ಮಾಡಲಾಗುತ್ತಿದೆ. ಪ್ರಸ್ತುತ ಪ್ರಜಾಪ್ರಭುತ್ವ ಜಾರಿಯಲ್ಲಿದೆ. ಹೀಗಿರುವಾಗ ರಾಜಪ್ರಭುತ್ವದ ಪಳೆಯುಳಿಕೆ ಸಾರುವ ಯುವರಾಜ, ಮಹಾರಾಜ ಪದಗಳನ್ನು ಬಳಿಸಿ ವ್ಯಕ್ತಿಗಳನ್ನು ವೈಭವೀಕರಿಸುವಂತಿಲ್ಲ ಎಂದು ಸಂವಿಧಾನದ 18ನೇ ವಿಧಿ ಹೇಳುತ್ತದೆ. ಹಾಗಾಗಿ ಟಿಪ್ಪು ಜಯಂತಿ ಆಚರಿಸುವುದು ತಪ್ಪು ಅರ್ಜಿದಾರರು ಎಂದು ಆಕ್ಷೇಪಿಸಿದ್ದರು. ಮೇಲಾಗಿ ಕಳೆದ ವರ್ಷ ಜಯಂತಿ ಆಚರಣೆ ವೇಳೆ ಕೊಡಗಿನಲ್ಲಿ ಹಿಂಸಾಚಾರ ನಡೆದು ಇಬ್ಬರು ಅಮಾಯಕರು ಮೃತಪಟ್ಟಿದ್ದಾರೆ. ಸಾಮಾಜಿಕ ಸಾಮರಸ್ಯ ಕದಡುವ ಇಂತಹ ಆಚರಣೆಗಳನ್ನು ನಡೆಸದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು.

ಈ ವಾದಕ್ಕೆ ಪ್ರತಿಕ್ರಿಯಿಸಿ ಅಡ್ವೊಕೇಟ್ ಜನರಲ್‌ ಎಂ.ಆರ್‌. ನಾಯಕ್ ಅವರು, ಇದು ರಾಜ್ಯ ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರ. ಯಾವುದೇ ರಾಜಕೀಯ ದುರುದ್ದೇಶದಿಂದ ತೆಗೆದುಕೊಂಡ ನಿರ್ಧಾರವಲ್ಲ ಎಂದು ಸ್ಪಷ್ಟಪಡಿಸಿದರು. ನವೆಂಬರ್ 10 ರಂದು ಸರ್ಕಾರ ಟಿಪ್ಪು ಜಯಂತಿ ಆಚರಣೆಯನ್ನು ಸರ್ಕಾರಿ ಕಾರ್ಯಕ್ರಮವಾಗಿ ರಾಜ್ಯಾದ್ಯಂತ ಆಚರಿಸಲಾಗುತ್ತಿದೆ.

Leave a Reply

comments

Related Articles

error: