ಮೈಸೂರು

ಪ್ರವಾಸಿಗರನ್ನು ಕರೆಯುತ್ತಿರುವ ಭರ್ತಿಯಾಗದ ಮಳಿಗೆಗಳು : ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ

ಮೈಸೂರು,ಸೆ.26-ನಾಡಹಬ್ಬ ದಸರಾ ಮಹೋತ್ಸವ ಪ್ರಾರಂಭವಾಗಿ ಆರು ದಿನಗಳಾಗಿದೆ. ದಸರಾ ಮಹೋತ್ಸವ ಅಂಗವಾಗಿ ನಗರದಲ್ಲಿ ಆಯೋಜಿಸಿರುವ ಅನೇಕ ಕಾರ್ಯಕ್ರಮಗಳು ಈಗಾಗಲೇ ಪ್ರಾರಂಭವಾಗಿವೆ. ಇದರಲ್ಲಿ ದಸರಾ ವಸ್ತು ಪ್ರದರ್ಶನವು ಒಂದು. ದಸರಾ ಮಹೋತ್ಸವಕ್ಕೆ ಬರುವ ಪ್ರವಾಸಿಗರು ಜಂಬೂ ಸವಾರಿ, ಅರಮನೆ, ವಸ್ತುಪ್ರದರ್ಶನ ತಪ್ಪದೆ ನೋಡುತ್ತಾರೆ. ದಸರಾ ವಸ್ತುಪ್ರದರ್ಶನ ಸೆ.21 ರಂದು ಈಗಾಗಲೇ ಉದ್ಘಾಟನೆಯಾಗಿದೆ. ಆದರೆ ಪ್ರತಿ ಬಾರಿಯಂತೆ ಈ ಬಾರಿಯೂ ವಸ್ತುಪ್ರದರ್ಶನ ಆವರಣ ಖಾಲಿಯಾಗಿವೆ. ಮಳಿಗೆಗಳು ಇನ್ನು ಭರ್ತಿಯಾಗಿಲ್ಲ. ಅಲ್ಲದೆ, ಬಹುತೇಕ ಮಳಿಗೆಗಳ ಕಾಮಗಾರಿ ಇನ್ನು ಪ್ರಗತಿಯಲ್ಲಿದೆ.

ಈ ಬಾರಿ ಉದ್ಘಾಟನೆಯ ವೇಳೆಗಾಗಲೇ ದಸರಾ ವಸ್ತುಪ್ರದರ್ಶನದ ಕಾಮಗಾರಿ ಪೂರ್ಣಗೊಳಿಸಿ ಮಳಿಗೆಗಳ ಉದ್ಘಾಟನೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದರು. ಅಲ್ಲದೆ, ವಸ್ತುಪ್ರದರ್ಶನಕ್ಕೆ ಪರಿಶೀಲನೆ ನಡೆಸಲು ತೆರಳಿದ್ದ ಸಂದರ್ಭದಲ್ಲೂ ಸೆ.20 ರೊಳಗೆ ಕಾಮಗಾರಿ ಪೂರ್ಣಗೊಳಿಸಿ ಇಲ್ಲವಾದರೆ ಮಳಿಗೆ ನಿರ್ಮಾಣ ಮಾಡುವುದನ್ನು ಕ್ಯಾನ್ಸಲ್ ಮಾಡಿಕೊಳ್ಳಿ ಎಂದು ತಾಕೀತು ಮಾಡಿದ್ದರು. ಆದರೂ ದಸರಾ ವಸ್ತುಪ್ರದರ್ಶನದಲ್ಲಿನ ಮಳಿಗೆಗಳ ಕಾಮಗಾರಿ ಮಾತ್ರ ಎಂದಿನಂತೆ ಮಂದಗತಿಯಲ್ಲಿ ಸಾಗುತ್ತಿದ್ದು, ಸಂಪೂರ್ಣ ಮಳಿಗೆಗಳ ಕಾಮಗಾರಿ ಮುಗಿದು ವಸ್ತುಪ್ರದರ್ಶನ ಭರ್ತಿಯಾಗುವುದಕ್ಕೆ ಬಹುಶಃ ಒಂದು ತಿಂಗಳು ಬೇಕಾಗಬಹುದೇನೋ.

ಜಂಬೂ ಸವಾರಿ ವೀಕ್ಷಿಸಿದ್ದಾಯಿತು. ನಾಳೆ ದಸರಾ ವಸ್ತುಪ್ರದರ್ಶನ ನೋಡಿ ಬರುವ ಎಂದು ಒಂದು ತಿಂಗಳಿಗೂ ಮೊದಲು ದಸರಾ ವಸ್ತುಪ್ರದರ್ಶನಕ್ಕೆ ಭೇಟಿ ನೀಡುವ ಪ್ರವಾಸಿಗರು, ಸಾರ್ವಜನಿಕರು ಖಾಲಿ ಮಳಿಗೆಗಳನ್ನು, ಇನ್ನು ಕಾಮಗಾರಿ ನಡೆಯುತ್ತಿರುವ ಮಳಿಗೆಗಳನ್ನು ನೋಡಿಕೊಂಡು ಶಾಪಿಂಗ್ ಮಾಡಿಕೊಂಡು, ಇಷ್ಟವಾದ ತಿಂಡಿ ತಿನ್ನಿಸುಗಳನ್ನು ತಿಂದು, ಇಷ್ಟದ ಆಟವಾಡಿ ಬರಬೇಕಾಗುತ್ತದೆ ಅಷ್ಟೇ. ದಸರಾ ವಸ್ತುಪ್ರದರ್ಶನದಲ್ಲಿ ಪ್ರತಿ ಬಾರಿ ಈ ರೀತಿ ಮಳಿಗೆಗಳು ತಡವಾಗಿ ಪ್ರಾರಂಭವಾಗುವುದುಕ್ಕೆ ತಡವಾಗಿ ಟೆಂಡರ್ ಕರೆಯುವುದು ಕಾರಣ. ಬೇಗ ಟೆಂಡರ್ ಕರೆದರೆ ಉದ್ಘಾಟನೆ ವೇಳೆಗೆ ಎಲ್ಲ ಮಳಿಗೆಗಳು ಉದ್ಘಾಟನೆಯಾಗುವುದು ನೋಡಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಇನ್ನು ಈ ಬಾರಿ ದಸರಾ ವಸ್ತುಪ್ರದರ್ಶನದಲ್ಲಿ ವಿಶೇಷವಾಗಿ ವೈಟ್ ಹೌಸ್, ಚೆಸ್ಕಾಂ ನವರು ಪ್ಯಾಲೇಸ್, ಮಹಾರಾಜರು, ವಿಶ್ವೇಶ್ವರಯ್ಯ ಹೀಗೆ ಅನೇಕರ ಲೈಟಿಂಗ್ಸ್, ಗೋಮಟೇಶ್ವರ ಮೂರ್ತಿ, ಅಮ್ಯುಸಿಯಂ ನಲ್ಲಿ ಹೊಸ ಆಟಿಕೆಗಳನ್ನು ಪರಿಚಯಿಸಲಾಗುತ್ತಿದ್ದು, ಇನ್ನು ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ವತಿಯಿಂದ ಮೂರು ವಾಟರ್ ಫೌಂಟೇನ್ಸ್ ನಿರ್ಮಿಸಲಾಗಿದೆ. 40 ಸರ್ಕಾರಿ ಮಳಿಗೆಗಳಿದ್ದು, ಅದರಲ್ಲಿ ರಾಜ್ಯ ಸರ್ಕಾರ ಹಾಗೂ ನಿಗಮ ಮತ್ತು ಮಂಡಳಿಗಳ ಮಳಿಗೆಗಳು ಸೇರಿವೆ. ಕೇಂದ್ರ ಸರ್ಕಾರದ ನಬಾರ್ಡ್, ಪೋಸ್ಟ್ ಆಫೀಸ್ ಮಳಿಗೆಗಳಿರಲಿವೆ. ಟೆಂಡರ್ ನವರದು 250 ಮಳಿಗೆಗಳಿದ್ದು, ಅದರಲ್ಲಿ ಫುಡ್, ವಾಣಿಜ್ಯ, ಅಮ್ಯುಸಿಯಂ ಸೇರಿರಲಿದೆ.

ಕಾಮಗಾರಿ ವಿಳಂಬದ ಬಗ್ಗೆ ಮೈಸೂರು ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಸಿಇಓ ಶಶಿಕುಮಾರ್ ಅವರನ್ನು ಕೇಳಿದರೆ, ಈ ಬಾರಿ ವಸ್ತುಪ್ರದರ್ಶನದಲ್ಲಿ ವಿಶೇಷವಾಗಿ ಟೆಂಡರ್ ನವರು ವೈಟ್ ಹೌಸ್ ಅನ್ನು 70 ರಿಂದ 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ನಾಳೆ ಸಂಜೆಯ ಹೊತ್ತಿಗೆ ಪೂರ್ಣಗೊಳ್ಳಲಿದೆ. ಇನ್ನು ಉಳಿದ ಮಳಿಗೆಗ ಕಾಮಗಾರಿ ಆದಷ್ಟು ಬೇಗ ಮುಗಿಯಲಿದೆ. ಸೆ.29 ರ ವೇಳೆಗೆ ಶೇ.90 ರಷ್ಟು ಕಾಮಗಾರಿಗಳು ಪೂರ್ಣಗೊಳ್ಳಿದೆ ಎನ್ನುತ್ತಾರೆ. (ವರದಿ-ಎಂ.ಎನ್)

 

 

 

 

 

 

 

 

 

Leave a Reply

comments

Related Articles

error: