ಮೈಸೂರು

ಮಳೆಯಿಂದ ಆಹಾರ ಮೇಳದ ವ್ಯಾಪಾರಕ್ಕೆ ಮೋಡ ಕವಿದ ವಾತಾವರಣ

ಮೈಸೂರು, ಸೆ.26 : ಕಳೆದೆರಡು ದಿನಗಳಿಂದ ಚಂಡಿಯಂತೆ ಸಂಜೆ ಸುರಿದ ಮಳೆಯಿಂದಾಗಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಗಷ್ಟೇ ಹಿನ್ನಡೆಯಾಗಿಲ್ಲ ಇದರೊಂದಿಗೆ ಆಹಾರ ಮೇಳಕ್ಕೂ ಅಪಾರ ನಷ್ಟ ಸಂಭವಿಸಿದೆ ಎನ್ನುವುದು ವ್ಯಾಪಾರಿಗಳ ಅನಿಸಿಕೆ.

ಅತ್ಯಂತ ಜನಪ್ರಿಯ ಆಹಾರ ಮೇಳವು ಕಳೆದೆರಡು ದಿನದಿಂದ ಸಂಜೆ ಸಮಯದಲ್ಲಿ ಸುರಿದ ಮಳೆಯಿಂದಾಗಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ ಎನ್ನುವುದು ಲಲಿತಾ ಮಹಲ್ ಮೈದಾನದಲ್ಲಿ ಆಯೋಜಿಸಿರುವ ಆಹಾರ ಮೇಳದ ಬಹುತೇಕ ವ್ಯಾಪಾರಿಗಳ ಅಭಿಪ್ರಾಯವಾಗಿತ್ತು.

ಆಹಾರ ಮೇಳದ ಮುಖ್ಯ ಆಕರ್ಷಣೀಯ ಖಾದ್ಯ ಬೊಂಬು ಬಿರಿಯಾನಿ ಉಸ್ತುವಾರಿ ಹೆಚ್.ಡಿ.ಕೋಟೆಯ, ಬಸವನಗಿರಿ ಹಾಡಿಯ ಜಿ. ಸ್ವಾಮಿ ‘ಸಿಟಿಟುಡೆ’ಯೊಂದಿಗೆ ಮಾತನಾಡಿ ಮಳೆಯಿಂದಾಗಿ ವ್ಯಾಪಾರದಲ್ಲಿ ತೀವ್ರ ನಷ್ಟವಾಗಿದೆ, ನಮಗೆ ಶೆಡ್ಡಿನಲ್ಲಿ ಮಲಗಲೂ ಸೂಕ್ತ ವ್ಯವಸ್ಥೆಯಿಲ್ಲದೇ ಒದ್ದೆ ನೆಲದಲ್ಲಿಯೇ ರಾತ್ರಿ ಕಳೆದಿದ್ದಾಯ್ತು ಎಂದು ಬೇಸರಿಸಿ.  ಮೊದಲೆರಡು ದಿನ ಉತ್ತಮ ವ್ಯಾಪಾರ ನಡೆಯಿತು ಮುಂದಿನ ದಿನಗಳಲ್ಲಿ ಹೆಚ್ಚಿನ ನಿರೀಕ್ಷೆಯಿತ್ತು, ಆದರೆ ಪ್ರಕೃತಿ ನಾವೇಣಿಸಿದಂತೆ ನಡೆಯದು ಎಂದು ಸ್ವಯಂ ಸಂತೈಸಿಕೊಂಡು, ಮಳೆಯಿಂದಾಗಿ ಗ್ರಾಹಕರ ಕೊರತೆ ಮಾಡಿದ ಅಡುಗೆಯಲ್ಲಿಯೇ ವ್ಯರ್ಥವಾಗುತ್ತಿದೆ ಎಂದು ಬೇಸರಿಸಿದ ಅವರು ನಮಗೂ ಡಯಾಸ್ ವ್ಯವಸ್ಥೆ ಮಾಡಿದ್ದರೆ ಮಳೆಯಿಂದ ರಕ್ಷಿಸಿಕೊಳ್ಳುತ್ತಿದ್ದೆವು ಎನ್ನುವ ಅಳಲು ವ್ಯಕ್ತಪಡಿಸಿದರು.

ಆಹಾರ ಮೇಳದಲ್ಲಿ ಪ್ರಮುಖ ಆಕರ್ಷಣೆಗಳಲ್ಲಿ ದಾವಣಗೆರೆ ಬೆಣ್ಣೆ ದೋಸೆ, ಬಿಳಿಜೋಳದ ರೊಟ್ಟಿ, ಗಿರ್ಮಿಟ್- ಮಿರ್ಚಿ, ಬಂಗಾರ ಪೇಟೆ ಚಾಟ್ಸ್, ಮೇಲುಕೋಟೆ ಪುಳಿಯೋಗರೆ, ದೊನ್ನೆ ಬಿರಿಯಾರಿ, ಚಿಕನ್ ಕಬಾಬ್, ಮಟನ್ ಪಲಾವ್, ಅಕ್ಕಿ ಕಡುಬಿಗೆ ಹೆಚ್ಚಿನ ಬೇಡಿಕೆಯಿದೆ, ಮೊದಲೆರಡು ದಿನದ ವ್ಯಾಪಾರದಿಂದ ಮೊಗದಲ್ಲಿ ಮೂಡಿದ ನಗುವು, ಕಳೆದೆರಡು ದಿನಗಳ ಮಳೆಯು ನುಂಗಿ ಹಾಕಿದೆ ಎನ್ನುವುದು ಬಹುತೇಕ ವ್ಯಾಪಾರಿಗಳ ಅಳಲಾಗಿತ್ತು.

ಉತ್ತರ ಕರ್ನಾಟಕದ ಜನಪ್ರಿಯ ಖಾಧ್ಯ ಜೋಳ ರೊಟ್ಟಿ, ಎಣ್ಣೆಗಾಯಿ ಪಲ್ಯ, ಶೇಂಗಾ ಹಾಗೂ ಟೊಮೋಟ ಚಟ್ನಿಗೆ ಮೈಸೂರಿಗರು ಮನಸೋತಿದ್ದಾರೆ, ದಿನಂ ಪ್ರತಿ 1000ಕ್ಕೂ ಅಧಿಕ ರೊಟ್ಟಿಗಳು ಖರ್ಚಾಗುತ್ತಿವೆ ಎಂದು ಹುಬ್ಬಳ್ಳಿ ಮೂಲದ ಶಿವಯೋಗಿ ಚಿಕ್ಕಮಠ್ ಅವರು ತಿಳಿಸಿದರು. ನಮ್ಮಲ್ಲಿ 5 ಜನ ಮಹಿಳೆಯರು ಸೇರಿದಂತೆ 9 ಜನ ಕೆಲಸ ನಿರ್ವಹಿಸುತ್ತಿದ್ದು ಮಧ್ಯಾಹ್ನ 12ರಿಂದ ಗ್ರಾಹಕರ ಆಗಮನ ಶುರುವಾಗುತ್ತದೆ ಎಂದು ರೊಟ್ಟಿಗೆ ಹಿಟ್ಟು ಕಲಿಸುತ್ತಲೇ ಮಾತಿಗೆ ಪ್ರತಿಕ್ರಿಯಿಸಿದ್ದು ಭೂಮಿಕಾ. ಬೆಳಗ್ಗೆ 6 ರಿಂದಲೇ ನಮ್ಮ ದಿನಚರಿ ಆರಂಭವಾಗುವುದು, ಹುಬ್ಬಳ್ಳಿಯಿಂದ ಜೋಳ ಸೇರಿದಂತೆ, ಪುರಿ (ಮಂಡಕ್ಕಿ) ಬದನೆಕಾಯಿ, ಮೆಣಸಿನಕಾಯಿ ತರಲಾಗುವುದು ಸಂಜೆ ನಂತರ ಗಿರ್ಮಿಟ್ ಮತ್ತು ಮಿರ್ಚಿಗೆ ಹೆಚ್ಚಿನ ಬೇಡಿಕೆ ಮೂಡುತ್ತಿದ್ದು ಮೈಸೂರಿಗರು ಮೊದಲು ಗಿರ್ಮಿಟೆಂದ್ರೇನು ಎಂದು ಪ್ರಶ್ನಿಸಿ ರುಚಿ ಸವಿದ ಮೇಲೆ ಮತ್ತೆರಡು ಆರ್ಡರ್ ನೀಡುವರು ಎಂದು ತಿಳಿಸಿದರು.

ಒಟ್ಟಿನಲ್ಲಿ ಮಳೆಯಿಂದಾಗಿ ವ್ಯಾಪಾರ ನಷ್ಟವಾಗಿದ್ದು ವ್ಯಾಪಾರಕ್ಕೆ ಎರಡು ದಿನಗಳ ಹೆಚ್ಚಿನ ಗಡುವು ನೀಡಿದರೆ ವ್ಯಾಪಾರ ಸಮತೂಗಿಸಲು ಸಾಧ್ಯವೆನ್ನುವುದು ವ್ಯಾಪಾರಿಗಳ ಇಂಗಿತವಾಗಿತ್ತು.

ಮಹಿಳೆಯರಿಗೆ ಸೂಕ್ತ ಶೌಚಾಲಯ ಕೊರತೆಯಿದೆ, ನೀರಿನ ವ್ಯವಸ್ಥೆಯಿದೆಯಾದರೂ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲವೆನ್ನುವುದು ಕೆಲವು ವ್ಯಾಪಾರಿಗಳ ದೂರಿಗೆ, ಲಲಿತಾ ಮಹಲ್ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿರುವ ಆಹಾರ ಮೇಳವೂ ನಿರೀಕ್ಷೆಗೂ ಮೀರಿ ಜನಪ್ರಿಯತೆ ಗಳಿಸಿದೆ ಎನ್ನುವುದು ದಸರಾ ಉಪಸಮಿತಿಯ ಕೆ.ಎಂ. ಮಹದೇವಸ್ವಾಮಿ ಹಾಗೂ ಆಹಾರ ಇಲಾಖೆಯ ಜಯಮ್ಮನವರ ಅಭಿಪ್ರಾಯವಾಗಿತ್ತು.

ಆಹಾರ ಮೇಳದ ಯಶಸ್ವಿಗೆ ಕಳೆದ ಹದಿನೈದು ದಿನಗಳಿಂದ ಹಗಲಿರುಳೆನ್ನದೆ ಶ್ರಮಿಸಿದ್ದೇವೆ, ಮೇಳದಲ್ಲಿ ಅಲ್ಪಸ್ವಲ್ಪ ಕೊರತೆ ವ್ಯಕ್ತವಾಗಿದ್ದು ಅದು ನಗಣ್ಯವಾಗಿ, ಎಲ್ಲ ಆಹಾರ ಅಂಗಡಿಗಳ ಮುಂದೆ ಎರಡೆರಡು ಡಸ್ಟ್ ಬಿನ್, ಕುಡಿಯುವ ಮತ್ತು ಕೈತೊಳೆಯಲು ಬೇರೆ ಬೇರೆ ನೀರಿನ ವ್ಯವಸ್ಥೆ ಸೇರಿದಂತೆ ಸೂಕ್ತ ರೀತಿಯಲ್ಲಿ ವ್ಯಾಪಾರಿಗಳ ಬೇಡಿಕೆಗಳನ್ನು ಪೂರೈಸಲಾಗಿದೆ ಎಂದು ತಿಳಿಸಿದರು.

ಲಲಿತಾ ಮಹಲ್ ಪ್ಯಾಲೇಸ್ ಮೈದಾನದ ಆಹಾರ ಮೇಳದಲ್ಲಿ 74 ಮಳಿಗೆಗಳಲ್ಲಿ,  ಉತ್ತರ ಕರ್ನಾಟಕ ಆಹಾರ ಸೇರಿದಂತೆ  14 ಜಿಲ್ಲೆಗಳ  ತರೇವಾರಿ ಖಾಧ್ಯಗಳು,  ಉತ್ತರ ಭಾರತ ಆಹಾರ ಶೈಲಿಯೂ, ಸಿರಿಧಾನ್ಯವನ್ನು ಪರಿಚಯಿಸಲಾಗುತ್ತಿದೆ. ಸ್ವಚ್ಛತೆ ಹಾಗೂ ಯಶಸ್ವಿಗಾಗಿ ದಸರಾ ಉಪಸಮಿತಿ  ಪ್ರತಿ ದಿನ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತಿದ್ದು. ಈ ನಿಟ್ಟಿನಲ್ಲಿ 18 ದಸರಾ ಉಪಸಮಿತಿ ಸೇರಿದಂತೆ ನೂರಾರು ಜನ ಕಾರ್ಮಿಕರು ಶ್ರಮಿಸುತ್ತಿದ್ದಾರೆ ಎಂದು ದಸರಾ ಉಪಸಮಿತಿಯ ಸದಸ್ಯ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಉತ್ತರ ಉದಯ ಕುಮಾರ್ ತಿಳಿಸಿದರು.

ಸಂಜೆ ಮಳೆಯ ಸುರಿಯುವುದೆನ್ನುವ ನಿರೀಕ್ಷೆಯಿಂದಲೇ ಗ್ರಾಹಕರಿಗೆ ಸೂಕ್ತ ರಕ್ಷಣೆ ನೀಡಲು ಹಲವು ಅಂಗಡಿಗಳ ಮಾಲೀಕರು ಪ್ಲಾಸ್ಟಿಕ್ ತಾಡಪಲ್ ಕಟ್ಟಲು ಹಾಗೂ ಇತರೆ ರಕ್ಷಣಾ ವ್ಯವಸ್ಥೆ ಮಾಡುತ್ತಿದ್ದು  ಕಂಡು ಬಂತು. ಮುಂದಿನ ದಿನಗಳಲ್ಲಿಯಾದರೂ ಉತ್ತಮ ವ್ಯಾಪಾರ ನಡೆದು ನಮಗೆ ಬಲ ನೀಡಲಿ ಎನ್ನುವುದು ಹೆಚ್ಚಿನ ವ್ಯಾಪಾರಿಗಳ ನಿರೀಕ್ಷೆಯಾಗಿತ್ತು.  (ವರದಿ : ಕೆ.ಎಂ.ಆರ್)

Leave a Reply

comments

Related Articles

error: