ಕರ್ನಾಟಕಪ್ರಮುಖ ಸುದ್ದಿ

ಕಾವೇರಿ ನೀರು : ತಮಿಳುನಾಡು ಪಾಲು ಕಡಿತಕ್ಕೆ ರಾಜ್ಯ ಸರ್ಕಾರ ಮತ್ತೆ ಮನವಿ

ನವದೆಹಲಿ, ಸೆ.26 (ಪ್ರಮುಖ ಸುದ್ದಿ): ಕರ್ನಾಟಕದಲ್ಲಿ ಈಗ ನೀರಿನ ಅಗತ್ಯತೆ ಹೆಚ್ಚಾಗಿರುವುದರಿಂದ ಮತ್ತು ಕಳೆದ ಕೆಲ ವರ್ಷಗಳಿಂದ ರಾಜ್ಯದಲ್ಲಿ ಸತತವಾಗಿ ಬರ ಇರುವುದರಿಂದ ತಮಿಳುನಾಡಿಗೆ ಬಿಡಬೇಕಿರುವ ಕಾವೇರಿ ನೀರಿನ ಪ್ರಮಾಣವನ್ನು ಕಡಿತ ಮಾಡುವಂತೆ ಸುಪ್ರೀಂಕೋರ್ಟ್‍ಗೆ ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಸೋಮವಾರ ಹೇಳಿದ್ದಾರೆ.

ಸುಪ್ರೀಂಕೋರ್ಟ್‍ನಲ್ಲಿ ರಾಜ್ಯದ ಪರ ವಾದಿಸುತ್ತಿರುವ ನ್ಯಾಯವಾದಿ ಫಾಲಿ ಎಸ್.ನಾರಿಮನ್ ಮತ್ತು ರಾಜ್ಯದ ಕಾನೂನು ತಂಡದ ಸದಸ್ಯರು ಹಾಗೂ ತಾಂತ್ರಿಕ ತಂಡದ ಸದಸ್ಯರೊಂದಿಗೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು ಈ ಕುರಿತು ಸುದೀರ್ಘ ಸಭೆಯನ್ನೂ ನಡೆಸಿದ್ದಾರೆ. ಇದಕ್ಕೂ ಮೊದಲು ದೆಹಲಿಯ ಕರ್ನಾಟಕ ಭವನದಲ್ಲಿ ವಕೀಲರು ಮತ್ತು ಎಂಜಿನಿಯರ್ ಗಳ ಜೊತೆಗೆ ಚರ್ಚೆ ನಡೆಸಿದ ಪಾಟೀಲ್, ನಾರಿಮನ್ ಅವರೊಂದಿಗೆ ಚರ್ಚಿಸಬೇಕಾದ ಅಂಶಗಳ ಬಗ್ಗೆ ಮತ್ತು ಜಲ ವಿವಾದಗಳಲ್ಲಿನ ರಾಜ್ಯ ಕಾನೂನು ಹೋರಾಟಗಳ ಮುಂದಿನ ಹೆಜ್ಜೆ ಬಗ್ಗೆ ಸಮಾಲೋಚನೆ ನಡೆಸಿ ಮಾಹಿತಿ ಪಡೆದರು.

ಕಾವೇರಿ ನ್ಯಾಯಾಧೀಕರಣದ ಆದೇಶದಂತೆ ತಮಿಳುನಾಡು ರಾಜ್ಯಕ್ಕೆ ವರ್ಷವೊಂದರಲ್ಲಿ 192 ಟಿಎಂಸಿ ನೀರು ಬಿಡಬೇಕು. ರಾಜ್ಯದಲ್ಲಿ ನಿರಂತರ ಬರ ಇರುವ ಕಾರಣ ತಮಿಳುನಾಡಿಗೆ ಹೆಚ್ಚು ನೀರು ಬಿಡಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ 100 ಟಿಎಂಸಿಯಿಂದ 102 ಟಿಎಂಸಿಯಷ್ಟು ಮಾತ್ರ ನೀಡಬಹುದು ಎಂದು ಸುಪ್ರೀಮ್‍ಕೋರ್ಟ್‍ಗೆ ಮನವರಿಕೆ ಮಾಡಿಕೊಡಲು ನಿರ್ಧರಿಸಲಾಗಿದೆ.

ಈ ಕುರಿತು ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಪಾಟೀಲ್, “ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ನಾವು ಪ್ರಧಾನವಾಗಿ 9 ಅಂಶಗಳು ಅಡಕವಾಗಿರುವ ಮಾಸ್ಟರ್ ನೋಟ್ ಅನ್ನು ಸುಪ್ರೀಂಕೋರ್ಟ್‍ಗೆ ಸಲ್ಲಿಸಲಿದ್ದೇವೆ. ಈ ಬಗ್ಗೆ ನಾವು ಅರ್ಥಪೂರ್ಣ ಚರ್ಚೆ ನಡೆಸಿದ್ದೇವೆ” ಎಂದು ಹೇಳಿದ್ದಾರೆ.

(ಎನ್.ಬಿ)

Leave a Reply

comments

Related Articles

error: